ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಕಿಟ್‌ ದುರ್ಬಳಕೆ ಆರೋಪ: ಸಂಸದ ಪ್ರಜ್ವಲ್‌ ರೇವಣ್ಣ ನೇತೃತ್ವ ಪ್ರತಿಭಟನೆ

Last Updated 29 ಜೂನ್ 2021, 13:39 IST
ಅಕ್ಷರ ಗಾತ್ರ

ಹಾಸನ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗಾಗಿ ವಿತರಿಸುವುದಕ್ಕಾಗಿ ನೀಡಿರುವ ಆಹಾರ ಕಿಟ್‌ಗಳನ್ನು ಶಾಸಕ ಪ್ರೀತಂ ಗೌಡ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಂಸದ ಪ್ರಜ್ವಲ್‌ ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಅಕ್ರಮವಾಗಿ ಹಂಚಿಕೆಮಾಡಿರುವ ಕಿಟ್‌ಗಳನ್ನು ವಶಪಡಿಸಿಕೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಜರುಗಿಸಬೇಕು. ನೋಂದಾಯಿತ ಕಾರ್ಮಿಕರಿಗಾಗಿ ವಿತರಿಸಬೇಕಾಗಿದ್ದ ಹತ್ತು ಸಾವಿರ ಕಿಟ್‌ಗಳನ್ನುಅಧಿಕಾರಿಗಳನ್ನು ಬೆದರಿಸಿ, ಪಕ್ಷದ ಕಾರ್ಯಕರ್ತರಿಗೆ ಮತ್ತುಸುಸ್ಥಿತಿಯಲ್ಲಿರುವ ಕುಟುಂಬದವರಿಗೆ ಶಾಸಕರು ವಿತರಣೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ದಿನಸಿ‌ ಕಿಟ್ ಹಂಚಿ‌ ಶಾಸಕರು ಪುಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಟ್ಟಡ ಕಾರ್ಮಿಕರಿಗೆ ವಿತರಿಸಬೇಕಾಗಿರುವ ಆಹಾರ ಕಿಟ್‌ಗಳನ್ನು ಬಿಜೆಪಿ ಮುಖಂಡನ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದೆ. ಅರ್ಹರಿಗೆ ಆಹಾರ ಕಿಟ್‌ ತಲುಪಿಲ್ಲ. ಕೋವಿಡ್‌ ಮೊದಲ‌ ಅಲೆಯಲ್ಲೂ ನಾಲ್ಕು ಸಾವಿರ
ಕಿಟ್ ಸರಿಯಾಗಿ ಹಂಚಿಕೆಯಾಗಿಲ್ಲ. ಇದು ಜಿಲ್ಲಾಡಳಿತದ ವೈಫಲ್ಯ. ‌ಈ ಬಗ್ಗೆ ತನಿಖೆಯಾಗಬೇಕು ಎಂದು
ಒತ್ತಾಯಿಸಿದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ‘ಕಾರ್ಮಿಕ ನಿರೀಕ್ಷಕರ ಉಪಸ್ಥಿತಿಯಲ್ಲಿ ಆಹಾರದ ಕಿಟ್ ವಿತರಣೆ
ಮಾಡಬೇಕು. ಆದರೆ, ಬಿಜೆಪಿ ಬೆಂಬಲಿಗನ‌‌‌ ಮನೆಯಲ್ಲಿ ಕಿಟ್ ದಾಸ್ತಾನು ಮಾಡಿ, ತಮಗಿಷ್ಟ ಬಂದವರಿಗೆ ಕೊಡುತ್ತಿದ್ದಾರೆ.ಅರ್ಹರಿಗೆ ತಲುಪಿಸುವ ಕೆಲಸವಾಗಬೇಕು. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಆರ್‌.ಗಿರೀಶ್, ‘ಕಾರ್ಮಿಕ ನಿರೀಕ್ಷಕ ಹಾಗೂ ಉಪಕಾರ್ಮಿಕ ಆಯುಕ್ತರಿಂದ ವರದಿ ಪಡೆದುಕೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ಕಾರ್ಮಿಕರ ನೋಂದಣಿ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆ ಜತೆ ವಿತರಿಸಿರುವ ಆಹಾರ ಕಿಟ್‌ ಗಳ ಬಗ್ಗೆ ಮಾಹಿತಿ ಕೇಳಿದ್ದೇನೆ. ಅರ್ಹರಿಗೆ ಕಿಟ್‌ ತಲುಪಿಸಲಾಗುವುದು.ಅನ್ಯಾಯವಾಗಿದ್ದರೆ ಕಿಟ್‌ಗಳನ್ನು ವಾಪಸ್‌ ಕೊಡಿಸುವುದಾಗಿ ಶಾಸಕ ಪ್ರೀತಂ ಗೌಡ ಸಹ ಹೇಳಿದ್ದಾರೆ’ ಎಂದು ತಿಳಿಸಿದರು.

ನಂತರ ‌ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಅವರಿಗೂ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ, ಮುಖಂಡರಾದ ಎಚ್.ಪಿ.ಸ್ವರೂಪ್‌, ರಘು ಹೊಂಗೆರೆ, ಅಗಿಲೆ ಯೋಗೇಶ್‌, ಚನ್ನಂಗಿಹಳ್ಳಿ ಶ್ರೀಕಾಂತ್‌, ನಗರಸಭೆ ಸದಸ್ಯರಾದ ಗಿರೀಶ್‌ ಚನ್ನವೀರಪ್ಪ, ಶಂಕರ್‌, ಕ್ರಾಂತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT