ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ ನಗರಸಭೆ | ಅಧ್ಯಕ್ಷ ಸ್ಥಾನಕ್ಕೆ ಮಿತ್ರ ಪಕ್ಷಗಳ ಹಗ್ಗಜಗ್ಗಾಟ

ಹಾಸನ ನಗರಸಭೆ: ಅಧಿಕಾರ ನೀಡಲು ಬಿಜೆಪಿ ಮುಖಂಡರ ಪಟ್ಟು
Published 17 ಆಗಸ್ಟ್ 2024, 6:21 IST
Last Updated 17 ಆಗಸ್ಟ್ 2024, 6:21 IST
ಅಕ್ಷರ ಗಾತ್ರ

ಹಾಸನ: ಇಲ್ಲಿನ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ, ಅಧಿಕಾರ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ಶುರುವಾಗಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆ‍ಪಿ–ಜೆಡಿಎಸ್‌ ಮಧ್ಯೆ ಇದೀಗ ಹಗ್ಗಜಗ್ಗಾಟ ಶುರುವಾಗಿದೆ.

ನಗರಸಭೆಯಲ್ಲಿ ಒಟ್ಟು 35 ಸ್ಥಾನಗಳಿದ್ದು, ಜೆಡಿಎಸ್‌ 17 ಸ್ಥಾನಗಳನ್ನು ಹೊಂದುವ ಮೂಲಕ ದೊಡ್ಡ ಪಕ್ಷವಾಗಿದೆ. ಬಿಜೆಪಿ 14 ಸ್ಥಾನಗಳನ್ನು ಹೊಂದಿದ್ದು, ಇಬ್ಬರು ಜೆಡಿಎಸ್‌ ಜೊತೆಗೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಹಾಗೂ ಪಕ್ಷೇತರರು ತಲಾ ಎರಡು ಸ್ಥಾನ ಹೊಂದಿದ್ದಾರೆ. ಹಾಗಾಗಿ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ ಸುಲಭದಲ್ಲಿ ಜೆಡಿಎಸ್‌ಗೆ ಸಿಗಲಿವೆ.

ಆದರೆ, ಮೈತ್ರಿಯನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಇದೀಗ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನವನ್ನು ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಜೆಡಿಎಸ್‌–ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ, ಪ್ರಬಲ ಪ್ರತಿಪಕ್ಷವಿಲ್ಲದೇ ಸುಲಭವಾಗಿ ಅಧಿಕಾರ ನಡೆಸಬೇಕು ಎನ್ನುವ ಚಿಂತನೆ ಬಿಜೆಪಿ ಮುಖಂಡರದ್ದಾಗಿದೆ.

14 ಸ್ಥಾನಗಳನ್ನು ಹೊಂದಿದ್ದರೂ, ಕಳೆದ ಬಾರಿ ಮೀಸಲಾತಿಯ ಪರಿಣಾಮವಾಗಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ದೊರೆತಿತ್ತು. ಈ ಬಾರಿಯೂ ಬಿಜೆಪಿಗೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ ಪಡೆಯುವ ಮೂಲಕ ನಗರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎನ್ನುವ ಇರಾದೆ ಮುಖಂಡರದ್ದಾಗಿದೆ.

ಪಾಲಿಕೆಯಾಗಲಿದೆ ನಗರಸಭೆ: ಇದೀಗ ಸುತ್ತಲಿನ 25 ಗ್ರಾಮ ಪಂಚಾಯಿತಿಗಳನ್ನು ಹಾಸನ ನಗರಸಭೆಗೆ ಸೇರಿಸಲಾಗಿದ್ದು, ಶೀಘ್ರದಲ್ಲಿಯೇ ಹಾಸನ ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೆ ಏರುವ ಲಕ್ಷಣಗಳು ಕಾಣುತ್ತಿವೆ. ಈ ಸಂದರ್ಭದಲ್ಲಿ ಅಧಿಕಾರದ ಭಾಗವಾದಲ್ಲಿ ಸಂಘಟನೆಗೂ ಹೆಚ್ಚಿನ ಅನುಕೂಲ ಆಗಲಿದೆ ಎನ್ನುವ ಮಾತುಗಳನ್ನು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

ಮೈತ್ರಿ ವಿಷಯದಲ್ಲಿ ಕಗ್ಗಂಟಾಗಿರುವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡರನ್ನು ಬಿಜೆಪಿ ವರಿಷ್ಠರು ದೂರವಿಟ್ಟಿದ್ದು, ಇದೀಗ ನಗರಸಭೆಯ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳ ವಿಚಾರದಲ್ಲೂ ತಲೆ ಹಾಕದಂತೆ ಸೂಚನೆ ನೀಡಲಾಗಿದೆ. ಹೀಗಾಗಿ ನಗರದಲ್ಲಿ ಬಿಜೆಪಿಗೆ ನಾಯಕತ್ವವೇ ಇಲ್ಲದಂತಾಗಿದೆ.

ಇದರಿಂದಾಗಿ ಬಿಜೆಪಿ ನಗರಸಭೆ ಸದಸ್ಯರು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳೇ ನೇತೃತ್ವ ವಹಿಸಿದ್ದು, ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT