ಮಂಗಳವಾರ, ಜನವರಿ 25, 2022
28 °C
ಪ್ರೀತಂ ಗೌಡ ವಿರುದ್ಧ ಆರೋಪ: ಕೋರ್ಟ್‌ ಮೊರೆ ಹೋಗಲು ನಿರ್ಧಾರ–ಸ್ವರೂಪ್

ಹಾಸನ: ವಿಜಯನಗರ ಬಡಾವಣೆ ನಿವೇಶನ ಹಂಚಿಕೆಯಲ್ಲಿ ಅಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದ ವಿಜಯನಗರ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿದ್ದ ಜಾಗವನ್ನು ನಿವೇಶನಗಳಾಗಿ ಪರಿವರ್ತಿಸಿ ಹೊರ ವರ್ತುಲ ರಸ್ತೆ ಸಂತ್ರಸ್ತರಿಗೆ ಪರಿಹಾರವಾಗಿ ನೀಡುವ ನೆಪದಲ್ಲಿ ಸ್ಥಳೀಯ ಶಾಸಕರ ಬೆಂಬಲಿಗರಿಗೆ ವಾಮಮಾರ್ಗದಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್‌ ಮುಖಂಡ ಎಚ್.ಪಿ.ಸ್ವರೂಪ್ ಆರೋಪಿಸಿದರು.

ಬಡಾವಣೆಯಲ್ಲಿ ಶಾಲೆ, ಕಾಲೇಜು, ಉದ್ಯಾನ, ಅಂಚೆ ಕಚೇರಿ, ಬ್ಯಾಂಕ್‍ಗಳಿಗೆಂದು ಮೀಸಲಿಟ್ಟಿದ್ದ ಸಿಎ ನಿವೇಶನಗಳನ್ನು ಅಕ್ರಮವಾಗಿ ಪರಿವರ್ತಿಸಲಾಗಿದೆ. ಉದ್ದೂರು ಗ್ರಾಮದ ವ್ಯಾಪ್ತಿಯಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರವಾಗಿ ವಿಜಯನಗರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಬದಲಾಗಿ ಸಿಎ ನಿವೇಶನಗಳನ್ನು ಅಕ್ರಮವಾಗಿ ಪರಿವರ್ತಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ರೈತರಿಗೆ ಪರಿಹಾರವಾಗಿ ನೀಡಿದಂತೆ ಮಾಡಿ, ಶಾಸಕರ ಬೆಂಬಲಿಗರು, ಹಿಂಬಾಲಕರು ತಮ್ಮ ಹೆಸರಿಗೆ ಕ್ರಯ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಂತ್ರಸ್ತ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

‘ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ನಿವೇಶನಗಳಿಗೆ ಹುಡಾದಿಂದ ಅಕ್ರಮವಾಗಿ ನಕ್ಷೆ ತಯಾರಿಸಿ ವಸತಿ ಉದ್ದೇಶದ ನಿವೇಶನ ಸಂಖ್ಯೆ ನೀಡಿ ಸಂತ್ರಸ್ತರ ಹೆಸರಿಗೆ ಮಂಜೂರು ಮಾಡಲಾಗಿದೆ. ಈ ವೇಳೆ ಅರಣ್ಯ ಇಲಾಖೆ ನಿಯಮಗಳನ್ನೂ ಗಾಳಿಗೆ ತೂರಿ ಅಲ್ಲಿದ್ದ ನಾಲ್ಕೈದು ಮರಗಳನ್ನು ಕಡಿದು ಸಾಗಿಸಲಾಗಿದೆ. ಈ ಸಂಬಂಧ ಸ್ಥಳೀಯರು ನೀಡಿದ ದೂರು ಆಧರಿಸಿ ಅರಣ್ಯ ಇಲಾಖೆ ತನಿಖೆ ನಡೆಸಿ ಅಕ್ರಮವಾಗಿ ಮರಗಳನ್ನು ಕಡಿದ ಕಾರಣಕ್ಕಾಗಿ ಹುಡಾಗೆ ₹15 ಸಾವಿರ ದಂಡ ವಿಧಿಸಿದೆ. ಇದರ ವಿರುದ್ಧ ಸ್ಥಳೀಯರ ಜೊತೆ ಸೇರಿ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ದೊಡ್ಡ ಕಟ್ಟಡ ಕಟ್ಟುವುದೇ ಅಭಿವೃದ್ಧಿಯಲ್ಲ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ. ಜೆಡಿಎಸ್‌ ನಾಯಕರು ಕಟ್ಟಿದ ಅನೇಕ ಕಟ್ಟಡಗಳಿಂದ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಏನನ್ನೂ ಮಾಡದ ಶಾಸಕರು, ₹6 ಲಕ್ಷದಿಂದ ₹7 ಲಕ್ಷದಲ್ಲಿ ಎರಡು ಫುಡ್‍ಕೋರ್ಟ್ ನಿರ್ಮಾಣ ಮಾಡಿರುವುದೇ ದೊಡ್ಡ ಸಾಧನೆ ಅಂದುಕೊಂಡಿದ್ದಾರೆ’ ಎಂದು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ವಾಸುದೇವ್, ಪ್ರಶಾಂತ್, ಮಹೇಶ್ ಮತ್ತು ಶಿವಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.