ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಆಂಬುಲೆನ್ಸ್‌ ಸೇವಾ ನಿರ್ಲಕ್ಷ್ಯದಿಂದ ಜೀವಹಾನಿ

ರೋಗಿಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತಿಲ್ಲ: ಡಿ.ಸಿ ಎಚ್ಚರಿಕೆ
Last Updated 24 ಜೂನ್ 2019, 12:26 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ 108 ಆಂಬುಲೆನ್ಸ್‌ಗಳ ಸೇವಾ ನಿರ್ಲಕ್ಷ್ಯದಿಂದ ಅನೇಕ ಜೀವ ಹಾನಿ ಹಾಗೂ ಗಂಭೀರ ಆರೋಗ್ಯ ತೊಂದರೆಗಳಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಎಚ್ಚರಿಕೆ ನೀಡಿದರು.

ಶಿಶು ಮತ್ತು ತಾಯಂದಿರ ಮರಣದ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಗರ್ಭಿಣಿ, ಬಾಣಂತಿಯರ ಸಾವಿನ ಅಂಕಿ ಅಂಶಗಳನ್ನು ಗಮನಿಸಿದ ಅವರು, ಬಹುತೇಕ ಸಾವುಗಳಿಗೆ ಆಂಬುಲೆನ್ಸ್‌ಗ ತಡವಾಗಿ ತಲುಪಿದ್ದು ಕೂಡ ಒಂದು ಪ್ರಮುಖ ಕಾರಣ ಎನಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇಂತಹ ಲೋಪ ಕಂಡು ಬಂದಲ್ಲಿ ಆಂಬುಲೆನ್ಸ್‌ ಹಾಗೂ ಈ ವ್ಯವಸ್ಥೆಯ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಯಾವುದೇ 108 ಆಂಬುಲೆನ್ಸ್‌ಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವಂತಿಲ್ಲ. ರೋಗಿಗಳ ಜೀವ ಹಾಗೂ ಸಮಯದ ಪ್ರಾಮುಖ್ಯತೆ ಅರಿತು ಕೆಲಸ ಮಾಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ 108 ಆಂಬುಲೆನ್ಸ್‌ ಚಾಲಕರಿಗೆ ಈ ಬಗ್ಗೆ ತರಬೇತಿ ಮತ್ತು ಮನನ ಕಾರ್ಯಗಾಯವನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗರ್ಭಿಣಿಯರು ಪ್ರಸವ ವೇದನೆಯಿಂದ ಆಸ್ಪತ್ರೆಗಳಿಗೆ ಬಂದಲ್ಲಿ ಅವರನ್ನು ದಾಖಲಿಸಿಕೊಳ್ಳದೇ ಮನೆಗೆ ಕಳುಹಿಸುವಂತಿಲ್ಲ. ಈ ಬಗ್ಗೆ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಅರೋಗ್ಯ ಕೇಂದ್ರಗಳು ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ತಾಯಂದಿರ ಮರಣ, ಶಿಶು ಮರಣ, ಮನೆ ಹೆರಿಗೆ ವರದಿ ಹಾಗೂ ರಾಷ್ಟ್ರೀಯ ಅಭಿಯಾನ ಕಾರ್ಯಕ್ರಮಗಳ ಪರಿಶೀಲನೆ ಮಾಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಜನಾರ್ಧನ್‌, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್‌ ಆರಾಧ್ಯ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ರಾಜಗೋಪಾಲ್‌, ವಿವಿಧ ಕಾರ್ಯಕ್ರಮ ಅಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT