ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು: ಕನ್ನಡ ಚಿತ್ರ ಪ್ರದರ್ಶನಕ್ಕೆ ಹೋರಾಡಿದ್ದ ಅನಕೃ

ಕನ್ನಡ ಕಾದಂಬರಿ ಸಾರ್ವಭೌಮನ ತವರೂರಲ್ಲಿ ಚಿರಸ್ಥಾಯಿ ಕಾರ್ಯ
Last Updated 1 ನವೆಂಬರ್ 2021, 5:54 IST
ಅಕ್ಷರ ಗಾತ್ರ

ಅರಕಲಗೂಡು: ಕನ್ನಡ ಸಾಹಿತ್ಯ ಮತ್ತು ಚಳವಳಿ ಎಂದರೆ ನೆನಪಾಗುವುದೇ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅನಕೃ). ಅನಕೃ ಅರಕಲಗೂಡಿನವರು ಎಂಬುದು ಹೆಮ್ಮೆಯ ಸಂಗತಿ.

ಆರು ದಶಕಗಳ ತಮ್ಮ ಸಾಹಿತ್ಯಕ ಜೀವನದಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ನಡೆಸಿರುವ ಇವರು 100 ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ, ಕಾದಂಬರಿ ಸಾರ್ವಭೌಮ ಎನಿಸಿ, ಕನ್ನಡಿಗರಲ್ಲಿ ಓದುವ ಗೀಳು ಹತ್ತಿಸಿದರು. ಕನ್ನಡ ಏಕೀಕರಣ ಚಳವಳಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

ಬೆಂಗಳೂರಿನಲ್ಲಿ ಕನ್ನಡ ಭಾಷೆ ಹೀನಾಯ ಸ್ಥಿತಿಯಲ್ಲಿದ್ದ ವೇಳೆ ಒಡನಾಡಿಗಳಾದ ತರಾಸು, ಮ.ರಾಮಮೂರ್ತಿ ಅವರೊಂದಿಗೆ ಸೇರಿ ಕನ್ನಡ ಚಳುವಳಿಯನ್ನು ಹುಟ್ಟು ಹಾಕಿ, ನಾಡಿನಾದ್ಯಂತ ಸಂಚರಿಸಿ ಜನರಲ್ಲಿ ಭಾಷಾಭಿಮಾನ ಮೂಡಿಸಿದವರು.

ಕೇವಲ ಪೌರಾಣಿಕ ನಾಟಕಗಳಿಗೆ ಸೀಮಿತವಾಗಿದ್ದ ರಂಗಭೂಮಿಗೆ ಸಾಮಾಜಿಕ ನಾಟಕ ರಚಿಸಿ ಕೊಡುವ ಮೂಲಕ ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು. ಪರಭಾಷಾ ಚಿತ್ರಗಳ ಹಾವಳಿ ವಿರುದ್ಧ ಕನ್ನಡ ಚಿತ್ರಗಳ ಕಡ್ಡಾಯ ಪ್ರದರ್ಶನಕ್ಕೆ ಒತ್ತಾಯಿಸಿ ಅವರು ನಡೆಸಿದ ಹೋರಾಟ ಈಗ ಇತಿಹಾಸ.

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ವಚನ ಗಾಯನಕ್ಕೆ ನಾಂದಿ ಹಾಡಿದರು. ಬೆಂಗಳೂರಿನ ರಾಮೋತ್ಸವ ಸಂಗೀತ ಕಚೇರಿಗಳಲ್ಲಿ ದಾಸರ, ಶರಣರ ಕೃತಿಗಳನ್ನು ಹಾಡುವಂತೆ ಪ್ರತಿಭಟಿಸಿ, ಕನ್ನಡ ಕೃತಿಗಳ ಗಾಯನ ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

‘ನನ್ನಂತವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ’. ಇದು ಅನಕೃ ಅವರ ಪ್ರಸಿದ್ದ ಉಕ್ತಿ. ಇದರಂತೆ, ನಾಡು ನುಡಿಯ ಏಳಿಗೆಗಾಗಿ ಜೀವನದುದ್ದಕ್ಕೂ ಹೋರಾಟ ನಡೆಸಿದರು. ಹಾಗಾಗಿ ಅನಕೃ ಕುರಿತು ಹಲವು ಉತ್ತಮ ಕೆಲಸಗಳು ನಡೆದಿದೆ.

ಮಾಜಿ ಸಚಿವ ಎ.ಮಂಜು ಅವರು 1997ರಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಪಟ್ಟಣದಲ್ಲಿ ಅನಕೃ ಅವರ ಪುತ್ಥಳಿ ಸ್ಥಾಪಿಸಿ, ಮೇರು ನಟ ಅಂಬರೀಷ್ ಅವರಿಂದ ಉದ್ಘಾಟಿಸಿದರು. ಅವರ ಕುಟುಂಬದ ಸದಸ್ಯರೂ ಭಾಗಿ ಯಾಗಿದ್ದು ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿತು.

2014 ರಲ್ಲಿ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಹಾಗೂ ಅವರ ಅಭಿಮಾನಿ ಬಳಗದವರು ಆರಂಭಿಸಿದ ಅನಕೃ ನೆನಪು ಹಾಗೂ ಅನಕೃ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಸಾಹಿತ್ಯಾಭಿಮಾನಿಗಳು ಸಂಭ್ರಮಿಸುವಂತಹ ಸಾಹಿತ್ಯದ ಹಬ್ಬವಾಗಿ ರೂಪುಗೊಂಡಿದೆ.

ಸಾಹಿತಿಗಳಾದ ಬಿ.ಎಸ್. ಕೇಶವರಾವ್, ಡಾ.ದೊಡ್ಡರಂಗೇಗೌಡ, ಡಾ. ಎಚ್.ಎಸ್.ವೆಂಕಟೇಶ್ ಮೂರ್ತಿ, ಪ್ರೊ. ಜಿ.ಎಸ್.ಸಿದ್ದಲಿಂಗಯ್ಯ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ, ಆಡಳಿತ ಸೇವೆಯ ಎಸ್.ಎಸ್. ಮಧುಕೇಶ್ವರ್ ಈವರೆಗೆ ಅನಕೃ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರಿಂದ ಸ್ಫೂರ್ತಿ ಪಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಷ್ಣು ಪ್ರಕಾಶ್ 2017 ಪರಿಷತ್ ವತಿಯಿಂದ ಅನಕೃ ಸಾಹಿತ್ಯ ಪ್ರಶಸ್ತಿ ಸಮಾರಂಭ ಆರಂಭಿಸಿದ್ದು ವಿಶೇಷ.

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಕವಿ ಡಾ.ನಿಸಾರ್ ಅಹಮದ್, ಡಾ. ಸಿದ್ದಲಿಂಗಯ್ಯ, ತಾಲ್ಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದ ಸಂಗೀತ ವಿದ್ವಾಂಸ ಸಹೋದರರಾದ ಆರ್. ಎನ್. ತ್ಯಾಗರಾಜ್ ಮತ್ತು ಆರ್.ಎನ್.ತಾರಾನಾಥ್, ಅನಕೃ ಸಾಹಿತ್ಯ ಕುರಿತು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಪಿಎಚ್. ಡಿ ಪದವಿ ಪಡೆದ ಎನ್.ಯೋಗೇಶ್ ಈವರೆಗೆ ಪುರಸ್ಕೃತಗೊಂಡಿದ್ದಾರೆ.

ಅನಕೃ ಕನ್ನಡ ಬಳಗ ಎಂಬ ಸಂಘಟನೆ ಸಹ ಕನ್ನಡ ಕುರಿತು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅನಕೃ ಕನ್ನಡ ಭವನ ನಿರ್ಮಾಣದ ಚಿಂತನೆ ಸಾಕಾರಗೊಳ್ಳಬೇಕಿದೆ. ಕನ್ನಡ ಕಾದಂಬರಿ ಸಾರ್ವಭೌಮ ಅನಕೃ ತವರೂರಿನಲ್ಲಿ ಚಿರಸ್ಥಾಯಿಯಾಗು ವಂತಹ ಕೆಲಸ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT