ಭಾನುವಾರ, ಸೆಪ್ಟೆಂಬರ್ 22, 2019
25 °C
ಮಳೆ ಹಾನಿ ವಿವರ ತಂತ್ರಾಂಶದಲ್ಲಿ ನಮೂದು: ಡಿ.ಸಿ ಗಿರೀಶ್‌

ಅನಧಿಕೃತ ಮನೆಗಳಿಗೂ ಪರಿಹಾರ

Published:
Updated:
Prajavani

ಹಾಸನ: ರಾಜ್ಯ ಮುಖ್ಯ ಕಾರ್ಯದರ್ಶಿ ಸೂಚನೆಯಂತೆ ಜಿಲ್ಲೆಯಲ್ಲಿ ನೆರೆ ಹಾವಳಿ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಒಟ್ಟಾರೆಯಾಗಿ ನಿರಾಶ್ರಿತರಾಗಿರುವ ಸುಮಾರು 2300 ಮಂದಿಗೆ ಪರಿಹಾರ ನೀಡಬೇಕಿದೆ. ಈ ಪೈಕಿ 125 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, ಅವುಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕಿದೆ. ಹಾಗೆಯೇ ಶೇಕಡಾ 75 ರಷ್ಟು ಹಾನಿಯಾಗಿರುವ ಮನೆಗಳಿಗೆ ಸುಮಾರು ₹ 1 ಲಕ್ಷ ಮತ್ತು ಶೇಕಡಾ 25 ಕ್ಕಿಂತ ಕಡಿಮೆ ಹಾನಿ ಆಗಿರುವ ಮನೆಗಳಿಗೆ ತಲಾ ₹ 25 ಸಾವಿರ ಪರಿಹಾರ ನೀಡಲಾಗುವುದು ಎಂದು ವಿವರಿಸಿದರು.

ಮನೆಗಳ ಹಾನಿ ವಿವರವನ್ನು ತಂತ್ರಾಂಶದಲ್ಲಿ ನಮೂದಿಸುವ ಕಾರ್ಯ ಈಗಾಗಲೇ ಶೇಕಡಾ 90 ರಷ್ಟು ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಶನಿವಾರ ಸಂಜೆಯೊಳಗೆ ಪೂರ್ಣಗೊಳಿಸಲಾಗುವುದು. ಸಂಪೂರ್ಣ ಡಾಟಾ ಎಂಟ್ರಿಯಾದ ಬಳಿಕ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಗೆ ಕಳುಹಿಸಿಕೊಡಲಾಗುವುದು. ಅವರು ಪಟ್ಟಿ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಅನುದಾನ ನೀಡಲಿದ್ದಾರೆ ಎಂದು ಹೇಳಿದರು.

ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮನೆಗಳು ಹಾನಿಯಾಗಿದ್ದರೆ ಅವುಗಳಿಗೂ ಪರಿಹಾರ ಕೊಡುವ ಆಲೋಚನೆ ಸರ್ಕಾರದ ಮುಂದಿದೆ. ಆದರೆ, ಮುಂದೆ ಅಧಿಕೃತ ಜಾಗದಲ್ಲಿ ಹೊಸ ಮನೆ ಕಟ್ಟಿದರೆ ಮಾತ್ರ ಅಂಥವರಿಗೆ ಪರಿಹಾರ ಸಿಗಲಿದೆ. ಮತ್ತೊಮ್ಮೆ ಅನಧಿಕೃತ ಜಾಗದಲ್ಲಿ ಅಥವಾ ಹಾನಿಯಾಗಿರುವ ಮನೆಯನ್ನೇ ರಿಪೇರಿ ಮಾಡಿಸಿಕೊಳ್ಳಲು ಪರಿಹಾರ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ 1600 ಮಂದಿಗೆ ತಲಾ ₹ 10 ಸಾವಿರ ಪರಿಹಾರ ನೀಡಲಾಗಿದ್ದು, ಸುಮಾರು 60 ಅರ್ಜಿ ಬಾಕಿ ಇವೆ. ಅವುಗಳನ್ನು ಪರಿಶೀಲಿಸಿ ಕ್ರಮಬದ್ಧವಾಗಿದ್ದರೆ ಆರ್ಥಿಕ ನೆರಲು ನೀಡಲಾಗುವುದು. ಅರ್ಹರಿಗೆ ಮಾತ್ರ ಪರಿಹಾರ ಸಿಗಬೇಕು.ಅದು ಅನರ್ಹರ ಪಾಲಾಗದಂತೆ ಸರ್ಕಾರದಿಂದ ಬಂದ ಕಟ್ಟುನಿಟ್ಟಿನ ಸೂಚನೆಯನ್ನು ಪಾಲನೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ  ಅತಿವೃಷ್ಟಿಯಿಂದ ಆಗಿರುವ ಹಾನಿಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಅದನ್ನು ಪರಿಶೀಲಿಸಿದ ಬಳಿಕ ಸಂಬಂಧಪಟ್ಟ ಇಲಾಖೆಗಳಿಗೆ ಪರಿಹಾರ ಹಂಚಿಕೆಯಾಗಲಿದೆ ಎಂದರು.

ಜಿಲ್ಲೆಯಲ್ಲಿ ಮತ್ತೆ ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ಹಾಗೂ ತುರ್ತು ಸೇವೆ ಮತ್ತು ಸಂಬಂಧಪಟ್ಟ ತಹಶೀಲ್ದಾರ್ ಅವರೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯ ಎಲ್ಲೂ ಭೂಮಿ ಅಥವಾ ಮನೆ ಕುಸಿದಿರುವ ಬಗ್ಗೆ ವರದಿಯಾಗಿಲ್ಲ. ಹೇಮಾವತಿ ನದಿಯಲ್ಲಿ ಒಳ ಹರಿವು ಏರಿಕೆಯಾಗಿದೆ. ಆದರೆ ,ಅಪಾಯದ ಮಟ್ಟ ತಲುಪಿಲ್ಲ. ಹೀಗಾಗಿ ಯಾರೂ ಗಾಬರಿ ಪಡಬೇಕಾದ ಅಗತ್ಯವಿಲ್ಲ ಎಂದು ಅಭಯ ನೀಡಿದರು.

Post Comments (+)