ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ದಿಶಾ ಸಭೆ: ಟೋಲ್ ಸಿಬ್ಬಂದಿ ವರ್ತನೆಗೆ ಅಸಮಾಧಾನ

ಶಾಂತಿಗ್ರಾಮ ಟೋಲ್‌ಗೇಟ್‌ನಲ್ಲಿ ಅಧಿಕಾರಿಗಳಿಗೇ ತಡೆ: ಸಂಸದ ಪ್ರಜ್ವಲ್‌ ಆಕ್ರೋಶ
Published 24 ಆಗಸ್ಟ್ 2023, 14:34 IST
Last Updated 24 ಆಗಸ್ಟ್ 2023, 14:34 IST
ಅಕ್ಷರ ಗಾತ್ರ

ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಶಾಂತಿಗ್ರಾಮ ಟೋಲ್‌ನಲ್ಲಿ ಸರ್ಕಾರಿ ಹಾಗೂ ಜನಪ್ರತಿನಿಧಿಗಳ ವಾಹನಗಳನ್ನು ತಡೆಯುತ್ತಿರುವ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕರು ದಿಶಾ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ನಗರದ ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಮುಂದುವರಿದ ದಿಶಾ ಸಭೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಎಲ್‌ ಅಂಡ್ ಟಿ ಖಾಸಗಿ ಕಂಪನಿ ವಿರುದ್ಧ ಪ್ರಜ್ವಲ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

‘ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯ ಶಾಂತಿಗ್ರಾಮ ಟೋಲ್‌ನಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್ ಅವರನ್ನು ತಡೆದು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದಾರೆ. ಅವರು ಬದಲಿ ವಾಹನದಲ್ಲಿ ತೆರಳುವಂತಾಗಿದೆ. ಸರ್ಕಾರಿ ವಾಹನಗಳನ್ನೇ ಇವರು ಬಿಡುವುದಿಲ್ಲ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದರೆ ಇಂತಹ ಟೋಲ್‌ಗಳು ಏಕೆ ಇರಬೇಕು’ ಪ್ರಶ್ನಿಸಿದರು.

‘ಘಟನೆ ನಡೆದಾಗ ಸ್ಥಳೀಯರು ವಿಡಿಯೊ ಮಾಡಿದ್ದು, ಅಲ್ಲಿನ ಅಧಿಕಾರಿಗಳು ಉಡಾಫೆಯಿಂದ ನಡೆದುಕೊಂಡಿದ್ದಾರೆ. ‘ಇನ್ನಷ್ಟು ಹೊತ್ತು ನಿಲ್ಲಲಿ ಬಿಡ್ರಿ’ ಎಂದು ಮಾತನಾಡಿದ್ದಾರೆ. ಅಧಿಕಾರಿಗಳು ಗುರುತಿನ ಚೀಟಿ ತೋರಿಸಿದರೂ ಬಿಡುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್‌. ಪೂರ್ಣಿಮಾ ಅವರು, ‘ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಇದೇ ರೀತಿ ವರ್ತನೆಯನ್ನು ಟೋಲ್ ಸಿಬ್ಬಂದಿ ಮುಂದುವರಿಸಿದ್ದಾರೆ’ ಎಂದು ಸಂಸದರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಟೋಲ್ ಸಿಬ್ಬಂದಿ ಹಾಗೂ ಅಧಿಕಾರಿ ಪುನೀತ್, ‘ಒಂದೆರಡು ಪ್ರಕರಣ ಈ ರೀತಿ ನಡೆದಿವೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಹೇಳಿದರು.

ಇದಕ್ಕೆ ಸುಮ್ಮನಾಗದ ಪ್ರಜ್ವಲ್ ರೇವಣ್ಣ, ‘ನಾನು 11 ವರ್ಷ ದುಡಿದು ಜನಪ್ರತಿನಿಧಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದೇನೆ. ನನಗೆ ಹಾರಿಕೆಯ ಉತ್ತರ ನೀಡಬೇಡಿ. ಟೋಲ್‌ನಲ್ಲಿ ಕೆಲಸ ನಿರ್ವಹಿಸುವ ಸೋಮೇಶ್ ಹಾಗೂ ಫ್ರಾನ್ಸಿಸ್ ಅವರ ನಡವಳಿಕೆ ಬದಲಿಸಿಕೊಳ್ಳಲು ಹೇಳಿ. ಮುಂದಿನ ದಿನಗಳಲ್ಲಿ ಸರ್ಕಾರಿ ಗುರುತಿನ ಚೀಟಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಟೋಲ್‌ನಲ್ಲಿ ಸುಗಮವಾಗಿ ಸಾಗಲು ವ್ಯವಸ್ಥೆ ಮಾಡಬೇಕು’ ಎಂದು ತಾಕೀತು ಮಾಡಿದರು.

ಸರ್ಕಾರಿ ಅಧಿಕಾರಿಗಳು ಜಿಲ್ಲೆಯಿಂದ ಅಕ್ಕಪಕ್ಕದ ತಾಲ್ಲೂಕಿಗೆ ಓಡಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಟೋಲ್‌ಗೇಟ್‌ ಬಳಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅಡ್ಡಿ ಮಾಡುವುದು ಸರಿಯಲ್ಲ ಎಂದು ಸೂಚನೆ ನೀಡಿದರು.

ಅಬಕಾರಿ ಇಲಾಖೆ ವಿರುದ್ಧ ಅಸಮಾಧಾನ: ಗುರುವಾರವೂ ಅಬಕಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಹಾಗೂ ಸಂಸದರು, ಶ್ರವಣೂರು ಗ್ರಾಮದಲ್ಲಿ ಎಂಎಸ್ಐಎಲ್ ಸೇರಿದಂತೆ ಸಿಎಲ್ 7 ಬಾರ್‌ಗಳನ್ನು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು.

‘ಮದ್ಯದಂಗಡಿ ಸ್ಥಳಾಂತರ ಮಾಡುವಂತೆ ಆದೇಶ ಮಾಡಿ, ಎಂಟೇ ದಿನದಲ್ಲಿ ವಾಪಸ್ ಪಡೆಯುತ್ತಾರೆ ಎಂದರೆ ಇದರಲ್ಲಿ ಯಾರ ಕೈವಾಡವಿದೆ ಎಂಬುದು ತಿಳಿಯುತ್ತಿಲ್ಲ. ಪೊಲೀಸ್ ಇಲಾಖೆಯಿಂದಲೂ ಸಹ ಮದ್ಯದ ಅಂಗಡಿ ಇರುವುದರಿಂದ ಯಾವುದೇ ಗಲಾಟೆ ನಡೆದಿಲ್ಲ ಎಂದು ವರದಿ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಬೇಕು. ಮುಂದಿನ ದಿನದಲ್ಲಿ ಇಲ್ಲಿ ಯಾವುದೇ ಗಲಾಟೆಯಾದರೂ ಪೊಲೀಸರು ಮತ್ತು ಸಂಬಂಧಪಟ್ಟ ಅಬಕಾರಿ ಇಲಾಖೆಯವರೇ ಕಾರಣರಾಗುತ್ತಾರೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

‘ಯಾವುದೇ ಮದ್ಯದಂಗಡಿ ತೆರೆಯಲು ಕಾನೂನು ಇದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಇಂತಿಷ್ಟು ದೂರದಲ್ಲಿ ಕಟ್ಟಡ ಇರಬೇಕು. ಆದರೆ ಇದನ್ನು ಮೀರಿ ಎಂಎಸ್ಐಎಲ್ ನಡೆಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಿ, ಕಟ್ಟಡವನ್ನು ತೆರವು ಮಾಡಿ. ಇಲ್ಲ ಅಂದರೆ ಕಾನೂನು ವ್ಯಾಪ್ತಿಯಲ್ಲಿ ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ’ ಎಂದು ಪ್ರಜ್ವಲ್ ಹೇಳಿದರು.

‘ಕಟ್ಟಡ ಕಾನೂನು ಬಾಹಿರ ಆಗಿರುವುದರಿಂದ ನೋಟಿಸ್ ನೀಡುವ ಮೂಲಕ ಸ್ಥಳಾಂತರ ಮಾಡಿ’ ಎಂದು ರೇವಣ್ಣ ಸೂಚನೆ ನೀಡಿದರು.

ವಸತಿ ಶಾಲೆ ದಾಖಲಾತಿಗೆ ಹಣ
‘ತಮ್ಮ ಕ್ಷೇತ್ರದ ಗುರುಮಾರನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 11 ವಿದ್ಯಾರ್ಥಿಗಳನ್ನು ಮೆರಿಟ್ ಆಧಾರವಿಲ್ಲದೇ ನೇರವಾಗಿ ದಾಖಲಾತಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ನನ್ನ ಗಮನಕ್ಕೂ ಬಂದಿಲ್ಲ. ಹಾಸ್ಟೆಲ್ ವಾರ್ಡನ್ ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ’ ಎಂದು ಶಾಸಕ ಸಿ.ಎನ್‌. ಬಾಲಕೃಷ್ಣ ಆರೋಪಿಸಿದರು. ‘11 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ₹ 10 ಸಾವಿರದಿಂದ ₹ 20 ಸಾವಿರ ಪಡೆಯಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ನ್ಯೂನತೆ ಬಗ್ಗೆ ಇಲಾಖೆ ವ್ಯಾಪ್ತಿಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ತೀರ್ಮಾನ ಕೈಗೊಳ್ಳಲು’ ರೇವಣ್ಣ ಸೂಚಿಸಿದರು.
ಖಾತರಿ ಯೋಜನೆಯಡಿ ಅವ್ಯವಹಾರ
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅವ್ಯವವಾರ ನಡೆದಿದ್ದು ಕಳೆದೆರಡು ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೈಗೊಳ್ಳುವ ಕಾಮಗಾರಿಗಳಿಗೆ ₹ 194 ಕೋಟಿ ಬಿಡುಗಡೆಯಾಗಿದೆ. ಆದರೆ ಈ ಹಣದಲ್ಲಿ ₹ 180 ಕೋಟಿಗೂ ಹೆಚ್ಚು ದುರುಪಯೋಗವಾಗಿದೆ ಎಂದು ಅರಸೀಕೆರೆ ತಾಲ್ಲೂಕಿನ ಮುಖಂಡರಾದ ಸುಮಾ ಸಭೆಯ ಗಮನಕ್ಕೆ ತಂದರು. ಇದಕ್ಕೆ ಧ್ವನಿಗೂಡಿಸಿದ ಎಚ್.ಡಿ. ರೇವಣ್ಣ ‘ಉದ್ಯೋಗ ಖಾತ್ರಿ ಯೋಜನೆ ಅಡಿ ಮಾನವ ಕೆಲಸಕ್ಕೆ ಶೇ 60 ಹಣ ಮೀಸಲಿಡಬೇಕು. ಆದರೆ ₹ 120 ಕೋಟಿಗೂ ಹೆಚ್ಚು ವಸ್ತುಗಳ ಖರೀದಿಗೆ ವಿನಿಯೋಗಿಸಲಾಗಿದೆ. ಇದು ಕಾನೂನು ಉಲ್ಲಂಘನೆಯಾಗಿದ್ದು ಈ ಬಗ್ಗೆ ತನಿಖೆಗೆ ಒಳಪಡಿಸುವುದು ಸೂಕ್ತ’ ಎಂದು ಒತ್ತಾಯಿಸಿದರು. ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ ಅವರಿಗೆ ಸೂಚನೆ ನೀಡಿದರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT