ಮಂಗಳವಾರ, ಸೆಪ್ಟೆಂಬರ್ 17, 2019
21 °C

ಅಂಕಪಟ್ಟಿ ಕೇಳಿದಕ್ಕೆ ಕೆರೆಗೆ ಹಾರಿ ಬಾಲಕ ಆತ್ಮಹತ್ಯೆ

Published:
Updated:
Prajavani

ಹಾಸನ: ಟೆಸ್ಟ್ ಮಾರ್ಕ್ಸ್ ಕಾರ್ಡ್ ತೋರಿಸುವಂತೆ ಕೇಳಿದ್ದಕ್ಕೆ ಮುನಿಸಿಕೊಂಡ 9 ನೇ ತರಗತಿ ವಿದ್ಯಾರ್ಥಿ ನಗರದ ಹೊರವಲಯದ ಸತ್ಯಮಂಗಲ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸತ್ಯಮಂಗಲ ಬಡಾವಣೆ ನಿವಾಸಿ ಹರೀಶ್-ವಿಜಯಾ ದಂಪತಿ ಪುತ್ರ ಅಮಿತ್ (13) ಆತ್ಮಹತ್ಯೆಗೆ ಮುನ್ನ ತಾಯಿ ಮೊಬೈಲ್‌ನಿಂದ ತಂದೆಗೆ ಕರೆ ಮಾಡಿ, ‘ ಪಪ್ಪ ನಾನು ಸಾಯುತ್ತಿದ್ದೇನೆ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದಾನೆ.

ಮಂಗಳವಾರ ಮೊಹರಂ ಅಂಗವಾಗಿ ಶಾಲೆಗೆ ರಜೆ ಇತ್ತು. ತಂದೆ ಹರೀಶ್ ಕೆಲಸದ ನಿಮಿತ್ತ ಹೊರ ಹೋಗಿದ್ದರು. ತಾಯಿ ಅಂಕಪಟ್ಟಿ ಕೇಳಿದಾಗ ಆತ ತೋರಿಸಲಿಲ್ಲ. ‘ತಂದೆ ಬಂದ ನಂತರ ಅದಕ್ಕೆ ಸಹಿ ಹಾಕಿಸಿಕೊಂಡು ಹೋಗು. ಮುಂದಿನ ವರ್ಷ 10ನೇ ತರಗತಿಗೆ ಹೋಗುತ್ತೀಯಾ, ಚೆನ್ನಾಗಿ ಓದು’ ಎಂದು ಬುದ್ಧಿವಾದ ಹೇಳಿದ್ದಾರೆ.

ಸ್ನೇಹಿತರೊಂದಿಗೆ ಗಣೇಶ ವಿಸರ್ಜನೆಗೆ ತೆರಳುತ್ತಿರುವುದಾಗಿ ಹೇಳಿ ತಾಯಿ ಮೊಬೈಲ್ ಪಡೆದು ಸತ್ಯಮಂಗಲ ಕೆರೆ ಬಳಿ ಅಮಿತ್‌ ಹೋಗಿ ತಂದೆಗೆ ಕರೆ ಮಾಡಿದ್ದಾನೆ.  ಕೆರೆ ದಡದಲ್ಲಿ ಬಾಲಕನ ಚಪ್ಪಲಿ ಪತ್ತೆ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯಿಂದ ಮಂಗಳವಾರ ತಡರಾತ್ರಿವರೆಗೂ ಪೋಷಕರು, ಸಂಬಂಧಿಗಳು ಹುಟುಕಾಟ ನಡೆಸಿದರು. ಅದಾದ ಬಳಿಕ ಬುಧವಾರ ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದರು. ಗುರುವಾರ ಸಂಜೆ ಬಾಲಕ ಶವ ಪತ್ತೆಯಾಯಿತು. ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.

 

 

Post Comments (+)