ಸೋಮವಾರ, ಡಿಸೆಂಬರ್ 9, 2019
23 °C
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ

ಅನುದಾನ ನೀಡದಿದ್ದರೆ ಮಾತೃಪೂರ್ಣ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಅನುದಾನ ಬಿಡುಗಡೆ ಮಾಡದಿದ್ದರೆ ಡಿ. 10 ರಿಂದ ಮಾತೃಪೂರ್ಣ ಯೋಜನೆ ಸ್ಥಗಿತಗೊಳಿಸಲಾಗುವುದು ಎಂದು ಅಂಗನವಾಡಿ ನೌಕರರು ಎಚ್ಚರಿಕೆ ನೀಡಿದರು.

ನಗರದ ಹೇಮಾವತಿ ಪ್ರತಿಮೆಯಿಂದ ಸಿಐಟಿಯು ನೇತೃತ್ವದಲ್ಲಿ ನೂರಾರು ಅಂಗನವಾಡಿ ನೌಕರರು ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಕೆಲ ಹೊತ್ತು ಪ್ರತಿಭಟನೆ ನಡೆಸಿದ ಬಳಿಕ ಅಲ್ಲಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತೆರಳಿ ಪ್ರತಿಭಟನೆ ನಡೆಸಿದರು.

ಅನುದಾನ ಬಿಡುಗಡೆಗಾಗಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಡಿ.6 ರೊಳಗೆ ಹಣ ನೀಡದಿದ್ದರೆ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮಾತೃಪೂರ್ಣ ಯೋಜನೆಯ ನಂತರ ಸಹಾಯಕಿಯರ ಕೆಲಸ ದುಪ್ಪಟ್ಟು ಆಗಿರುವ ಕಾರಣ ಕಾರ್ಯಕರ್ತೆಯರಿಗೆ ನೀಡುವ ಗೌರವಧನದ ಶೇಕಡಾ 75ರಷ್ಟು ಸಹಾಯಕಿಯರಿಗೂ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಅನೇಕರು ಪದವೀಧರರು ಇರುವುದರಿಂದ ಅವರಿಗೆ ತರಬೇತಿ ನೀಡಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಹಾಗೂ ಆರಂಭವಾಗಬೇಕಿರುವ ಎಲ್‌ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಬೇಕು. ಅವುಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿದರು.

ಎನ್‌ಪಿಎಸ್‌ ಮಾನದಂಡದಂತೆ ವೇತನ ವಂತಿಕೆ ಆಧಾರಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು. ನಿವೃತ್ತಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಇಡುಗಂಟು ತಕ್ಷಣ ಬಿಡುಗಡೆ ಮಾಡಬೇಕು. ನಿವೃತ್ತಿ ಆದವರಿಗೆ ಕನಿಷ್ಠ ₹ 6 ಸಾವಿರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಕಡಿತ ಮಾಡಿರುವ ಅನುದಾನ ವಾಪಸ್‌ ನೀಡಬೇಕು. ಐದು ವರ್ಷ ಪೂರೈಸಿದ ಮೇಲ್ವಿಚಾರಕಿಯರನ್ನು ಕಡ್ಡಾಯ ವರ್ಗಾವಣೆ ಮಾಡಬೇಕು. ಸೇವಾ ನಿಯಾಮಾವಳಿ ರಚಿಸಬೇಕು ಹಾಗೂ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಮಿತಿಯನ್ನು ಸಡಿಲಿಸಬೇಕು ಎಂದು ಮನವಿ ಮಾಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಡಿ.10ರಿಂದ ಅನಿರ್ದಿಷ್ಟ ಮುಷ್ಕರ ನಡೆಸಲಾಗುವುದು ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ ಹೇಳಿದರು. 

ಮನವಿ ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪಾಪಬೋವಿ, ‘ಎಲ್ಲಾ ತಾಲ್ಲೂಕಿನ ಸಿಡಿಪಿಒಗಳ ಜತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆ ಗೌರವ ಧನ ನೀಡಲಾಗುವುದು. ಸಹಾಯಕಿಯರ ಹುದ್ದೆ ಭರ್ತಿಗೆ ಕ್ರಮ ವಹಿಸಲಾಗಿದೆ’ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್‌, ಸತ್ಯನಾರಾಯಣ, ನವೀನ್‌ ಕುಮಾರ್‌, ಸಂಘದ ಪದಾಧಿಕಾರಿಗಳಾದ ಇಂದ್ರಮ್ಮ, ಶೈಲಜಾ, ಕಾಮಾಕ್ಷಿ, ಲತಾ, ವೀಣಾ, ಶಾರದ ಇದ್ದರು. 

ಪ್ರತಿಕ್ರಿಯಿಸಿ (+)