ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ವಹಿವಾಟು ಸುಗಮಗೊಳಿಸಿ

ಎಸ್ಪಿ, ಮಾರುಕಟ್ಟೆ ಅಧಿಕಾರಿಗಳಿಗೆ ಸಂಸದ ಪ್ರಜ್ವಲ್‌ ಸೂಚನೆ
Last Updated 3 ಏಪ್ರಿಲ್ 2020, 16:35 IST
ಅಕ್ಷರ ಗಾತ್ರ

ಹಾಸನ: ರೈತರು, ಖರೀದಿದಾರರು ಹಾಗೂ ಮಾರಾಟಗಾರರಿಗೆ ಮಾರುಕಟ್ಟೆ ಪ್ರವೇಶಕ್ಕೆ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಿ ವಹಿವಾಟು ಸುಗಮವಾಗಿ ನಡೆಸಲು ಅಗತ್ಯ ಕ್ರಮವಹಿಸುವಂತೆ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಯಿತು.

ಎಪಿಎಂಸಿ ವರ್ತಕರ ಸಂಘದ ಪ್ರತಿನಿಧಿಗಳು ಮಾರುಕಟ್ಟೆ ಪ್ರವೇಶಕ್ಕೆ ಖರೀದಿ ಹಾಗೂ ವಿಲೇವಾರಿಗೆ ತಮಗಾಗುತ್ತಿರುವ ತೊಡಕುಗಳ ಬಗ್ಗೆ ವಿವರಿಸಿದರು.

ಎಪಿಎಂಸಿ ಅಧ್ಯಕ್ಷ ಕಣದಳ್ಳಿ ಮಂಜೇಗೌಡ, ಮಾಜಿ ಅಧ್ಯಕ್ಷ ಲಕ್ಷ್ಮಣ, ವರ್ತಕರ ಸಂಘದ ಗೋಪಾಲ್, ಚಂದ್ರ ಅವರು ಸ್ಥಳೀಯ ಸಮಸ್ಯೆಗಳನ್ನು ವಿವರಿಸಿ ನೈಜ ಮಾರಾಟಗಾರರು, ಖರೀದಿದಾರರು, ಚಿಲ್ಲರೆ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಪಾಸ್‍ ವಿತರಿಸಿ, ಹಾಲಿ ವಶಕ್ಕೆ ಪಡೆದಿರುವ ದ್ವಿಚಕ್ರ ವಾಹನ ಬಿಡಬೇಕು. ಸಾಧ್ಯವಾದಲ್ಲಿ ಬೀದಿ ಬದಿಯ ಚಿಲ್ಲರೆ ಮಾರಾಟಗಾರರಿಗೂ ಖರೀದಿಗೆ ಅವಕಾಶ ಕಲ್ಪಿಸುವಂತೆ ಕೋರಿದರು.

ಸಮಸ್ಯೆ ಆಲಿಸಿದ ಪ್ರಜ್ವಲ್, ಸಂಕಷ್ಟದಲ್ಲಿ ಎಲ್ಲರೂ ಪರಸ್ಪರ ಸಹಕಾರ ಮಾಡಿ ಸವಾಲುಗಳನ್ನು ನಿಭಾಯಿಸಬೇಕು. ರೈತರು ಮತ್ತು ವರ್ತಕರಿಗೆ ತೊಂದರೆ ಆಗಬಾರದು. ಮುಂದಿನ ದಿನಗಳಲ್ಲಿ ವ್ಯವಸ್ಥೆ ನಿಭಾಯಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಎಪಿಎಂಸಿ ತರಕಾರಿ ಮಾರಾಟಕ್ಕೆ ನಿರ್ಬಂದ ಇಲ್ಲ. ಆದರೆ, ಕೇವಲ ಚಿಲ್ಲರೆ ಮಾರಾಟಗಾರರು ಬಂದು ಖರೀದಿಸಬೇಕು. ರೈತರ ಪ್ರವೇಶಕ್ಕೆ ಅಡ್ಡಿ ಇಲ್ಲ. ತಳ್ಳುವ ಗಾಡಿಗಳ ಮೂಲಕ ದಿನವಿಡಿ ಮನೆ ಮನೆ ಬಾಗಿಲಿಗೆ ಹಣ್ಣು ತರಕಾರಿಗಳನ್ನು ಮಾರಾಟ ಮಾಡಬಹುದು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಮಾತನಾಡಿ, ಈಗಾಗಲೇ 150 ಪಾಸ್ ಗಳನ್ನು ನೀಡಲಾಗಿದೆ. ಹಮಾಲಿಗಳು, ವರ್ತಕರಿಗೆ ಅಗತ್ಯವಿರುವಷ್ಟು ಹೆಚ್ಚುವರಿ ಪಾಸ್ ವಿತರಿಸಲಾಗುವುದು. ಅಂತರ ಜಿಲ್ಲೆಗಳಿಗೆ ಸರಕು ಸಾಗಾಣೆ ವಾಹನ ಓಡಾಟಕ್ಕೆ ಅಡ್ಡಿ ಇಲ್ಲ. ಗೂಡ್ಸ್ ವಾಹನಗಳನ್ನು ಯಾವುದೇ ಸ್ಥಿತಿಯಲ್ಲಿಯೂ ನಿಲ್ಲಿಸುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗುವುದು ಸಹಜ. ದೇಶದ ಹಿತದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡು ರೈತರು ಹಾಗೂ ಸಾರ್ವಜನಿಕರ ಹಿತ ಕಾಯಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ವಿಭಾಗಾಧಿಕಾರಿ ಡಾ.ನವೀನ್ ಭಟ್, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಜಗದೀಶ್, ಎಪಿಎಂಸಿ ಕಾರ್ಯದರ್ಶಿ ಶ್ರೀಹರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT