ಹಳೇಬೀಡು: ಗೃಹಲಕ್ಷ್ಮಿ ಯೋಜನೆ ಕುರಿತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಲ್ಲಿನ ನಾಡಕಚೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಗ್ರಾಮ ಓನ್ ಕೇಂದ್ರ ಹಾಗೂ ಬಾಪೂಜಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕೇಂದ್ರದ ನಿರ್ವಹಣೆ ನೋಡಿಕೊಳ್ಳುವವರಿಗೆ ನಿಷ್ಟೆಯಿಂದ ಕೆಲಸ ಮಾಡಿ ಸರ್ಕಾರಿ ಯೋಜನೆಯನ್ನು ಸಫಲಗೊಳಿಸುವಂತೆ ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಯಾವುದೇ ರೀತಿಯ ಅರ್ಜಿ ನಮೂನೆ ಇಲ್ಲ. ಗೃಹಲಕ್ಷ್ಮಿ ಯೋಜನೆಯ ಪಲಾನುಭವಿಗಳ ಆಧಾರ್ ಲಿಂಕ್ ಆಗಿರುವ ಮೊಬೈಲ್ ಫೋನಿಗೆ ಮೆಸೇಜ್ ಬರುತ್ತದೆ. ಮೆಸೇಜ್‌ನಲ್ಲಿ ಸೂಚಿಸಿರುವ ಗ್ರಾಮ ಒನ್ ಕೇಂದ್ರ, ಅಥವಾ ಬಾಪೂಜಿ ಕೇಂದ್ರಕ್ಕೆ ನಿಗದಿ ಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ತೆರಳಿ ನೋಂದಣಿ ಮಾಡಿಸಬೇಕು ನೋಂದಣಿಗೆ ಶುಲ್ಕ ಕೊಡುವಂತಿಲ್ಲ. ಆಧಾರ್ ಕಾರ್ಡ್, ಉಳಿತಾಯ ಖಾತೆಯ ಪುಸ್ತಕ ಹಾಗೂ ರೇಷನ್ ಕಾರ್ಡ್ ತರಬೇಕು. ನೋಂದಣಿ ಮಾಡಿಸುವಾಗ ಆಧಾರ್ ನೋಂದಣಿಯ ಪೋನ್ ನಂಬರ್ ಕೊಡಬೇಕು. ನೋಂದಣಿಗೆ ಹಣ ಕೇಳಿದರೆ, ಯಾರಾದರೂ ಅರ್ಜಿ ನಮೂನೆ ಭರ್ತಿ ಮಾಡಬೇಕು ಎಂದು ದಾರಿ ತಪ್ಪಿಸುವ ಕೆಲಸ ಮಾಡಿದರೆ. ದೂರವಾಣಿ ಸಂಖ್ಯೆ 7090275875ಕ್ಕೆ ಕರೆ ಮಾಡಬೇಕು ಎಂದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಕುಮಾರ್.ಎನ್ ತಿಳಿಸಿದರು.
ಶಿಶು ಅಭಿವೃದ್ದಿ ಅಧಿಕಾರಿ ವೆಂಕಟೇಶ್ ಮಾತನಾಡಿ, ‘ಈ ಯೋಜನೆ ನೋಂದಣಿಯನ್ನು ಸರಳೀಕರಿಸಲಾಗಿದೆ. ಫಲಾನುಭವಿಗಳು ಅನಗತ್ಯ ಪರದಾಡದೆ, ಮೊಬೈಲ್ ಪೋನಿಗೆ ಸಂದೇಶ ಬಂದಾಗ ನೋಂದಣಿ ಮಾಡಿಸಬೇಕು’ ಎಂದರು.
ಯೋಜನೆಗೆ ಅರ್ಜಿ ಇಲ್ಲದೆ, ನೋಂದಣಿ ಮಾಡಿಸುವ ಪ್ರಕ್ರಿಯೆ ಇದ್ದರೂ ವ್ಯಕ್ತಿಯೊಬ್ಬರು ಸಾರ್ವಜನಿಕರಿಗೆ ಅರ್ಜಿ ನಮೂನೆ ಭರ್ತಿ ಮಾಡಿಕೊಡುತ್ತಿದ್ದರು. ₹20 ಪಡೆದು ಅರ್ಜಿ ನಮೂನೆ ಭರ್ತಿ ಮಾಡಲಾಗುತ್ತಿತ್ತು. ನಾಡಕಚೇರಿ ಸುತ್ತಮುತ್ತ ಜಮಾಯಿಸಿದ್ದ ಸಾರ್ವಜನಿಕರಿಗೆ ಅಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಕುರಿತು ಮಾಹಿತಿ ನೀಡಿದರು.
ಅಧಿಕಾರಿಗಳು ಬಂದ ಕೂಡಲೆ ಆ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.