ಅರಣ್ಯ ಇಲಾಖೆ ಬೋನಿಗೆ ಗಂಡು ಚಿರತೆ

7
ಗೌರಿಪುರದಲ್ಲಿ ಕರು, ನಾಯಿ ಬೇಟೆಯಾಡಿ ಆತಂಕ ಸೃಷ್ಟಿಸಿತ್ತು

ಅರಣ್ಯ ಇಲಾಖೆ ಬೋನಿಗೆ ಗಂಡು ಚಿರತೆ

Published:
Updated:
Prajavani

ಹಾಸನ: ನಗರ ಹೊರವಲಯದ ಗೌರಿಪುರ ಬಳಿ ಹಲವು ತಿಂಗಳಿಂದ ಕಾಟ ಕೊಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.

ಕರು, ನಾಯಿಗಳನ್ನು ಬೇಟೆಯಾಡುವ ಮೂಲಕ ರೈತರು ಹಾಗೂ ಗ್ರಾಮೀಣ ಜನರಲ್ಲಿ ಆತಂಕ ಹುಟ್ಟಿಸಿತ್ತು. ಸುಮಾರು 10 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿರುವುದರಿಂದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

‘ಇನ್ನೂ ಎರಡು-ಮೂರು ಚಿರತೆಗಳಿದ್ದು ಅವುಗಳನ್ನೂ ಸೆರೆ ಹಿಡಿಯಬೇಕು. ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರಿಂದ ಗುಹೆ ಮತ್ತು ಕಲ್ಲು ಗುಡ್ಡಗಳು ಇರುವುದರಿಂದ ಚಿರತೆಗಳ ನೆಲೆಯೂ ಹೆಚ್ಚುತ್ತಿದೆ. ಕೂಡಲೇ ಎಲ್ಲಾ ಚಿರತೆಗಳನ್ನು ಸೆರೆ ಹಿಡಿಯುವ ಮೂಲಕ ಜನರಲ್ಲಿ ಮನೆ ಮಾಡಿರುವ ಭೀತಿ ಹೋಗಲಾಡಿಸಬೇಕು’ ಎಂದು
ಸ್ಥಳೀಯ ನಿವಾಸಿ ವಿಶ್ವನಾಥ್ ಆಗ್ರಹಿಸಿದರು.

‘ಸ್ಥಳೀಯರು ನೀಡಿದ ದೂರಿನ ಮೇರೆಗೆ ಇರಿಸಿದ್ದ ಬೋನಿಗೆ ಬಿದ್ದ ನಂತರ ಕೊಸರಾಡಿ ಸಣ್ಣಪುಟ್ಟ ಗಾಯವಾಗಿರುವ ಚಿರತೆಗೆ ಚಿಕಿತ್ಸೆ ನೀಡಲಾಗುವುದು. ನಂತರ ಯಾವ ಅರಣ್ಯಕ್ಕೆ ಬಿಡಬೇಕು ಎಂಬುದನ್ನು ತೀರ್ಮಾನ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಜಗದೀಶ್ ತಿಳಿಸಿದರು.

‘ಬೇಸಿಗೆ ಸಮೀಪಿಸುತ್ತಿರುವ ಕಾರಣ ಕಾಡಿನಲ್ಲಿ ಆಹಾರ-ನೀರಿನ ಅಭಾವ ತಲೆ ದೋರಿ ಕಾಡಿನಿಂದ ನಾಡಿನತ್ತ ಮುಖ ಮಾಡುವ ವನ್ಯ ಜೀವಿಗಳ ಹಾವಳಿಯೂ ವಿಪರೀತವಾಗುವ ಸಾಧ್ಯತೆಯಿದ್ದು, ಸಂಬಂಧಪಟ್ಟವರು ಎಚ್ಚೆತ್ತು ನಿಗಾವಹಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !