ಪುರಾತತ್ವ ಇಲಾಖೆ ಅಧೀಕ್ಷಕಿ ತರಾಟೆಗೆ

ಭಾನುವಾರ, ಜೂನ್ 16, 2019
28 °C
ಹಳೇಬೀಡಿಗೆ ಪುರಾತತ್ವ ಇಲಾಖೆ ಮಹಾನಿರ್ದೇಶಕಿ ಉಷಾಶರ್ಮ ಭೇಟಿ

ಪುರಾತತ್ವ ಇಲಾಖೆ ಅಧೀಕ್ಷಕಿ ತರಾಟೆಗೆ

Published:
Updated:
Prajavani

ಹಳೇಬೀಡು: ಹೊಯ್ಸಳರ ಕಾಲದ ಸ್ಮಾರಕಗಳ ಸಂರಕ್ಷಣೆ ಹಾಗೂ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಿರ್ವಹಣೆ ಇಲ್ಲದೆ ಸ್ಮಾರಕ ಹಾಗೂ ಬಿಡಿ ವಿಗ್ರಹಗಳು ಕಳೆಗುಂದುತ್ತಿವೆ ಎಂದು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕಿ ಉಷಾಶರ್ಮ ಪುರಾತತ್ವ ಇಲಾಖೆ ಅಧೀಕ್ಷಕಿ ಮೂರ್ತೇಶ್ವರಿ ಅವರನ್ನು ಪುರಾತತ್ವ ಸಂಗ್ರಹಾಲಯದಲ್ಲಿ ತರಾಟೆಗೆ ತೆಗೆದುಕೊಂಡರು.

ಮಂಗಳವಾರ ಸಂಜೆ ಉಷಾಶರ್ಮ, ಮ್ಯೂಸಿಯಂ ಪ್ರವೇಶಿಸಿದ ತಕ್ಷಣ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮ್ಯೂಸಿಯಂ ವೀಕ್ಷಿಸಿ ತೆರಳುವವರೆಗೂ ಇತಿಹಾಸದ ಅವಶೇಷಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಸರಿಯಾಗಿ ಕಾಪಾಡಬೇಕು ಎಂದು ಸಿಟ್ಟಿನಿಂದಲೇ ಹೇಳಿದರು.

ಮೂರು ತಿಂಗಳೊಳಗೆ ಸ್ಮಾರಕಗಳ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ದೂರದಿಂದ ಬರುವ ಪ್ರವಾಸಿಗರು ಕೆಲಕಾಲನ ವಿಶ್ರಾಂತಿ ಪಡೆಯಲು ಕಲ್ಲುಬೆಂಚುಗಳನ್ನು ಸೂಕ್ತವಾಗಿ ಅಳವಡಿಸಬೇಕು, ಬೇಕಾಬಿಟ್ಟಿ ಕೆಲಸಗಳಿಗೆ ಕಡಿವಾಣ ಹಾಕಬೇಕು ಎಂದು ಉಷಾಶರ್ಮ ಎಚ್ಚರಿಸಿದರು.

ಮ್ಯೂಸಿಯಂ ಮುಂಭಾಗದಲ್ಲಿದ್ದ ಪೊಲೀಸ್‌ ಚೌಕಿಯ ಶೆಡ್‌ ಸೌಂದರ್ಯಕ್ಕೆ ಧಕ್ಕೆಯಾಗಿದೆ ಎಂದು ತೆರವು ಮಾಡಿಸಿದರು. ಶೆಡ್‌ನಲ್ಲಿದ್ದ ಮುರಿದಿದ್ದ ಪಾಸ್ಟಿಕ್‌ ಕುರ್ಚಿ ನೋಡಿ ಅಸಮಾಧಾನ ವ್ಯಕ್ತಪಡಿಸಿದರು.

ದಿನಗೂಲಿ ನೌಕರರ ವೇತನ ಕಡಿತ

ಕೇಂದ್ರ ಪುರಾತತ್ವ ಇಲಾಖೆಗೆ ಆಡಳಿತಕ್ಕೆ ಒಳಪಟ್ಟ ಸ್ಮಾರಕಗಳಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರಿಗೆ ಸಮರ್ಪಕವಾಗಿ ವೇತನ ನೀಡುತ್ತಿಲ್ಲ. ಸರ್ಕಾರದ ನಿಯಮದ ಪ್ರಕಾರ ವೇತನ ನೀಡದೆ ಕಡಿತಗೊಳಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು.

ಯಾವುದೇ ಸಮಸ್ಯೆಗೂ ಮಹಾನಿರ್ದೇಶಕಿ ಉತ್ತರ ನೀಡಲಿಲ್ಲ. ಮಾಧ್ಯಮದವರಿಗೆ ಮಾಹಿತಿ ನೀಡಿ ಎಂದು ಅಧೀಕ್ಷಕಿ ಮೂರ್ತೇಶ್ವರಿ ಅವರಿಗೆ ಹೇಳಿ ತಮ್ಮ ವಾಹನದಲ್ಲಿ ತೆರಳಿದರು. ಅಧೀಕ್ಷಕಿ ಅವರೂ ಸಮರ್ಪಕ ಮಾಹಿತಿ ನೀಡಲಿಲ್ಲ.

ಹಿರಿಯ ಸ್ಮಾರಕ ಸಂರಕ್ಷಣಾಧಿಕಾರಿ ಕಿಶೋರ್‌ ಕುಮಾರ್‌ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ವ್ಯಾಪ್ಸ್‌ ಎಂಬ ಕಂಪನಿ ಕಾಂಪೌಂಡ್‌ ಕೆಲಸ ನಿರ್ವಹಿಸುತ್ತಿದೆ. ಕಂಪನಿಯವರಿಗೆ ಗುಣಮಟ್ಟದ ಕೆಲಸ ನಿರ್ವಹಿಸಲು ಸೂಚಿಸುತ್ತೇವೆ ಎಂದು ಹೇಳಿದರು.

ದಿನಗೂಲಿ ನೌಕರರಿಗೆ ಈಗ ಬ್ಯಾಂಕ್‌ ಖಾತೆಗೆ ವೇತನ ಜಮಾ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಕಿಶೋರ್‌ ಕುಮಾರ್‌ ಸಮರ್ಥಿಸಿಕೊಂಡರು.

ಜಿಲ್ಲಾಧಿಕಾರಿ ಪ್ರಿಯಂಕಾ ಮೇರಿ ಫ್ರಾನ್ಸಿಸ್‌, ಪ್ರವಾಸೋದ್ಯಮ ಉಪ ನಿರ್ದೆಶಕ ಶಿವಲಿಂಗಪ್ಪ, ಸಹಾಯಕ ಪುರಾತತ್ವ ಶಾಸ್ತ್ರಜ್ಞ ಪಿ.ಅರವಝಿ, ಸ್ಮಾರಕ ಸಂರಕ್ಷಣಾಧಿಕಾರಿ ಕಾಮತ್‌, ಸ್ಥಳೀಯ ಮುಖಂಡರಾದ ಅನಂತರಾಮು, ಕುಮಾರ್, ಅರ್ಚಕ ಸುಬ್ರಹ್ಮಣ್ಯ ಇದ್ದರು.

ಹೊಯ್ಸಳ ದೇವಾಲಯ ಪ್ರವೇಶಿಸದ ಮಹಾನಿರ್ದೇಶಕಿ

ಹಳೇಬೀಡಿಗೆ ಬರುವ ಪ್ರವಾಸಿಗರು ಮುಖ್ಯವಾಗಿ ಹೊಯ್ಸಳೇಶ್ವರ ದೇವಾಲಯ ವೀಕ್ಷಣೆ ಮಾಡುತ್ತಾರೆ. ನವದೆಹಲಿಯಿಂದ ಬಂದ ಪುರಾತತ್ವ ಮಹಾನಿರ್ದೇಶಕಿ ಉಷಾಶರ್ಮ ಭೇಟಿ ನೀಡಲಿಲ್ಲ. ಮ್ಯೂಸಿಯಂನಲ್ಲಿಯೇ ಸ್ಮಾರಕ ಸಮಸ್ಯೆ ಕುರಿತು ವಿಚಾರಣೆ ನಡೆಸಿದರು. ಮಹಾನಿರ್ದೇಶಕರು ಆಗಮಿಸುತ್ತಾರೆ ಎಂದು ಬೆವರು ಸುರಿಸಿ ಕೆಲಸ ಮಾಡಿದ ದಿನಗೂಲಿ ನೌಕರರು ಮಹಾನಿರ್ದೇಶಕರ ಸ್ವಾಗತಕ್ಕಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂತು.

ಕಾಂಪೌಂಡ್‌ ಅವ್ಯವಸ್ಥೆ– ದೂರು

ಹೊಯ್ಸಳೇಶ್ವರ, ಕೇದಾರೇಶ್ವರ, ನಗರೇಶ್ವರ ಹಾಗೂ ಜೈನಬಸದಿಯ ಗಟ್ಟಿಮುಟ್ಟಾದ ಕಾಂಪೌಂಡ್‌ಗಳನ್ನು ತೆರವುಗೊಳಿಸಲಾಗಿದೆ. ಈಗ ಕಳಪೆ ಕಾಮಗಾರಿಯ ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಗುಣಮಟ್ಟದ ಮರಳು ಹಾಗೂ ಸಿಮೆಂಟ್‌ ಉಪಯೋಗಿಸುತ್ತಿಲ್ಲ. ಹೊಸ ಕೆಲಸದ ಕ್ಯೂರಿಂಗ್‌ ಸಹ ಮಾಡುತ್ತಿಲ್ಲ. ಕಾಂಪೌಂಡ್‌ ಕೆಲಸ ಇದೇ ರೀತಿ ಮುಂದುವರೆದರೆ ಇತಿಹಾಸದ ಆಮೂಲ್ಯ ಸಾಕ್ಷಿಗಳಿಗೆ ಸುರಕ್ಷತೆ ಇಲ್ಲದಂತಾಗುತ್ತದೆ ಎಂದು ಸ್ಥಳೀಯರು ದೂರಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !