ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆ ಬೆತ್ತಲೆ ಉರುಳು ಸೇವೆ

ರಸ್ತೆಗಾಗಿ ಭೂಮಿ ಸ್ವಾಧೀನ: ಪರಿಹಾರ ನೀಡಲು ಆಗ್ರಹ
Last Updated 24 ಡಿಸೆಂಬರ್ 2018, 15:30 IST
ಅಕ್ಷರ ಗಾತ್ರ

ಹಾಸನ : ರಿಂಗ್ ರಸ್ತೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ತಮ್ಲಾಪುರ ರೈತರು ಅರೆಬೆತ್ತಲೆ ಉರುಳು ಸೇವೆ ನಡೆಸಿದರು.

ಹಾಸನಾಂಬ ದೇವಾಲಯದಿಂದ ಉರುಳು ಸೇವೆ ಆರಂಭಿಸಿ ಗಾಂಧಿ ಬಜಾರ್ ನಲ್ಲಿರುವ ಆಂಜನೇಯ ದೇವಾಲಯದ ಬಳಿ ಅಂತ್ಯಗೊಳಿಸಿದರು.

‘ತಾಲ್ಲೂಕಿನ ಕಸಬಾ ಹೋಬಳಿ, ತಮ್ಮಾಪುರ, ಉದ್ದೂರು, ಚಿಕ್ಕಕೊಂಡಗುಳ ಹಾಗೂ ಡೇರಿ ಸರ್ಕಲ್ ನಿಂದ ದೊಡ್ಡಮುಂಡಿಗನ ಹಳ್ಳಿವರೆಗೂ 1996 ರಲ್ಲಿ 110 ಅಡಿ ವಿಸ್ತೀರ್ಣದ ರಿಂಗ್ ರಸ್ತೆಗೆ ನಗರಾಭಿವೃದ್ಧಿ ಪ್ರಾಧಿಕಾರ ಭೂಮಿ ಸ್ವಾಧೀನ ಮಾಡಿಕೊಂಡಿತ್ತು. ಆದರೆ, ಈವರೆಗೂ ಸೂಕ್ತ ಪರಿಹಾರ ನೀಡಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ ಸ್ವಾಧೀನ ಪಡಿಸಿಕೊಂಡು ಇಷ್ಟು ವರ್ಷ ಕಳೆದರೂ ರೈತರಿಗೆ ಪರಿಹಾರ ನೀಡಿಲ್ಲ. ಈ ಹಿಂದೆ ಡೈರಿ ವೃತ್ತದಿಂದ ಸಾಲಗಾಮೆ ರಸ್ತೆ ದಾಟಿ ತೇಜೂರು ಸರ್ಕಲ್ ವರೆವಿಗೂ ರಸ್ತೆ ಮಾಡಿ ನಿಲ್ಲಿಸಲಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ಕಸ ಹಾಗೂ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ತಮ್ಲಾಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ರೋಹಿಣಿ ಅವರು ಪರಿಹಾರ ನೀಡುವ ಭರವಸೆ ನೀಡಿದ್ದರು. ಸಚಿವ ರೇವಣ್ಣ ಅವರು ಮನಸ್ಸು ಮಾಡಿದರೆ ಈ ರಸ್ತೆ ಕಾಮಗಾರಿ ಕೆಲವೇ ದಿನದಲ್ಲಿ ಪೂರ್ಣಗೊಳ್ಳಲಿದೆ. ಆದರೆ, ಅವರು ಆಸಕ್ತಿ ತೋರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪರಿಹಾರ ನೀಡಿ ರಸ್ತೆ ಕಾಮಗಾರಿ ಆರಂಭಿಸದಿದ್ದರೆ, ಬೆಂಗಳೂರಿಗೆ ಬೈಕ್‌ ರ‍್ಯಾಲಿ ನಡೆಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್, ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಮುಖಂಡರಾದ ಟಿ.ಗಣೇಶ್, ಮಹೇಶ್, ಗಿಡ್ಡೇಗೌಡ, ಮಂಜೇಗೌಡ, ವೆಂಕಟೇಶ್, ಶ್ರೀನಿವಾಸ್, ಶಶಿ, ರಾಮಚಂದ್ರು, ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT