ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ

ನಿದಾಸ್ ಕಪ್‌ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿ
Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೊಲಂಬೊ: ಕುಶಾಲ್ ಪೆರೇರ (66; 37 ಎ, 4 ಸಿ, 6 ಬೌಂ) ಅವರ ಭರ್ಜರಿ ಬ್ಯಾಟಿಂಗ್‌ಗೆ ಬೆದರಿದ ಭಾರತ ತಂಡ ನಿದಾಸ್ ಕಪ್‌ ತ್ರಿಕೋನ ಟ್ವೆಂಟಿ–20 ಸರಣಿಯ ಆರಂಭದಲ್ಲೇ ಆಘಾತ ಕಂಡಿತು.ಇಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ಐದು ವಿಕೆಟ್‌ಗಳ ಜಯ ಗಳಿಸಿತು.

175 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 70 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಸ್ಫೋಟಿಸಿದ ಪೆರೇರ ಭಾರತ ಬೌಲರ್‌ಗಳನ್ನು ನಿರಾಯಾಸವಾಗಿ ಎದುರಿಸಿದರು. ಗೆಲುವಿಗೆ 48 ರನ್ ಬೇಕಾಗಿದ್ದಾಗ ಔಟ್‌ ಆದರು. ಉಳಿದ ಬ್ಯಾಟ್ಸ್‌ಮನ್‌ಗಳು ತಂಡವನ್ನು ಸುಲಭವಾಗಿ ದಡ ಸೇರಿಸಿದರು.

ಶಿಖರ್‌ ಧವನ್‌ ಭರ್ಜರಿ ಬ್ಯಾಟಿಂಗ್‌: ಟಾಸ್‌ ಗೆದ್ದ ಆತಿಥೇಯರು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಇದಕ್ಕೆ ಫಲವೂ ಲಭಿಸಿತು. ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ ಮರಳಿದರು. ದುಷ್ಮಂತ ಚಮೀರ ಎಸೆತವನ್ನು ಸ್ಲೈಸ್ ಮಾಡಿದ ರೋಹಿತ್‌ ಅವರನ್ನು ಮಿಡ್‌ ಆಫ್‌ನಲ್ಲಿದ್ದ ಜೀವನ್ ಮೆಂಡಿಸ್ ಹಿಡಿತಕ್ಕೆ ಪಡೆದರು.

ಸ್ಫೋಟಕ ಬ್ಯಾಟ್ಸ್‌ಮನ್‌ ಸುರೇಶ್ ರೈನಾ ಎರಡನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಫರ್ನಾಂಡೊ ಅವರ ಎಸೆತವನ್ನು ಹಿಂದಕ್ಕೆ ಸರಿದು ಆಡಲು ಪ್ರಯತ್ನಿಸಿದ ರೈನಾ ಬೌಲ್ಡ್ ಆದರು.

ಈ ಸಂದರ್ಭದಲ್ಲಿ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತುಕೊಂಡು ಎಡಗೈ ಬ್ಯಾಟ್ಸ್‌ಮನ್‌ ಧವನ್‌ ಸ್ಫೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ತಂಡದ ಬೌಲರ್‌ಗಳನ್ನು ಕಾಡಿದರು. ಎದುರಿಸಿದ ಮೂರನೇ ಎಸೆತಲ್ಲೇ ಬೌಂಡರಿ ಗಳಿಸಿದ ಅವರು ಒಂಬತ್ತನೇ ಓವರ್‌ನಲ್ಲಿ ಫರ್ನಾಂಡೊ ಅವರನ್ನು ಎರಡು ಬಾರಿ ಸಿಕ್ಸರ್‌ಗೆ ಅಟ್ಟಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಮನೀಷ್ ಪಾಂಡೆ ಕೂಡ ಮೋಹಕ ಹೊಡೆತಗಳ ಮೂಲಕ ರಂಜಿಸಿದರು.

ಎಂಟನೇ ಓವರ್‌ನಲ್ಲಿ ಇನಿಂಗ್ಸ್‌ನ ಮೊದಲ ಸಿಕ್ಸರ್ ಸಿಡಿಸಿದ ಮನೀಷ್‌ ಮೂರನೇ ವಿಕೆಟ್‌ಗೆ 95 ರನ್‌ ಸೇರಿಸಿದರು. 35 ಎಸೆತಗಳಲ್ಲಿ ಅವರು 37 ರನ್‌ ಗಳಿಸಿದರು. ಆದರೆ ಧವನ್‌ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ತಲಾ ಆರು ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ 49 ಎಸೆತಗಳಲ್ಲಿ 90 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ:
20 ಓವರ್‌ಗಳಲ್ಲಿ 5ಕ್ಕೆ 174 (ಶಿಖರ್ ಧವನ್‌ 90, ಮನೀಷ್ ಪಾಂಡೆ 37; ದುಷ್ಮಂತ ಚಮೀರ 33ಕ್ಕೆ2); ಶ್ರೀಲಂಕಾ: 18.3 ಓವರ್‌ಗಳಲ್ಲಿ 5ಕ್ಕೆ 175 (ಕುಶಾಲ್‌ ಪೆರೇರ 66; ವಾಷಿಂಗ್ಟನ್ ಸುಂದರ್‌ 28ಕ್ಕೆ2, ಯಜುವೇಂದ್ರ ಚಾಹಲ್‌ 37ಕ್ಕೆ2). ಫಲಿತಾಂಶ: ಶ್ರೀಲಂಕಾಕ್ಕೆ 5 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಕುಶಾಲ್ ಪೆರೇರ. ಮುಂದಿನ ಪಂದ್ಯ: ಭಾರತ–ಬಾಂಗ್ಲಾದೇಶ. ಮಾರ್ಚ್ 8, ಸಂಜೆ 7ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT