ಸೋಮವಾರ, ಅಕ್ಟೋಬರ್ 21, 2019
26 °C

ಪ್ರೀತಿಸಲು ನಿರಾಕರಿಸಿದ ಯುವತಿಗೆ ರೇಸರ್‌ನಿಂದ ಹಲ್ಲೆ

Published:
Updated:
Prajavani

ಹೊಳೆನರಸೀ‍ಪುರ: ಪ್ರೀತಿಸಲು ನಿರಾಕರಿಸಿದ ಯುವತಿಗೆ ರೇಸರ್‌ನಿಂದ ಹಲ್ಲೆ ಮಾಡಿದ ಯುವಕನೊಬ್ಬನಿಗೆ ಪಟ್ಟಣದಲ್ಲಿ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅರಕಲಗೂಡು ತಾಲ್ಲೂಕಿನ ನೆಲಬಳ್ಳಿ ಗ್ರಾಮದ ಯುವಕ ಮಣಿಕಂಠ ಹಲ್ಲೆ ಆರೋಪಿ.

ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯ ಹಿಂದೆ ಬಿದಿದ್ದ ಮಣಿಕಂಠ ಆಕೆಯನ್ನು ಪೀತಿಸು ಎಂದು ಬಹಳ ದಿನಗಳಿಂದ ಪೀಡಿಸುತ್ತಿದ್ದ. ನಿರಾಕರಿಸಿದ್ದರಿಂದ ಆಕೆಗೆ ಬೆದರಿಕೆ ಹಾಕಿದ್ದ. ಈ ಕುರಿತು ಆಕೆ ತನ್ನ ಸಹೋದರನಿಗೆ ತಿಳಿಸಿದ್ದಳು.

ಶುಕ್ರವಾರ ಮಧ್ಯಾಹ್ನದ ವೇಳೆ ಯವತಿ ಕಾಲೇಜಿನಿಂದ ಹಿಂದಿರುಗುವಾಗ ಇಲ್ಲಿನ ರೈಲ್ವೆ ಟ್ರಾಕ್‌ಬಳಿ ಅಡ್ಡಗಟ್ಟಿ ರೇಸರ್‌ನಿಂದ ಯುವತಿಯ ಕೆನ್ನೆ, ಕೈಯನ್ನು ಕೊಯ್ದಿದ್ದಾನೆ.   ಇದೇ ವೇಳೆ ಆಕೆಯ ಹಿಂದೆ ಬರುತ್ತಿದ್ದ ಸಹೋದರ ಮಣಿಕಂಠನನ್ನು ಹಿಡಿದುಕೊಂಡಿದ್ದಾನೆ. ಕೂಡಲೇ ಆತನನ್ನು ಸುತ್ತುವರಿದ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿ ಆಸ್ಪತ್ರೆಗೆ ದಾಖಲಾಗಿದ್ದು, ಸಂಸದ ಪ್ರಜ್ವಲ್‌ , ಜಿಲ್ಲಾ ಪಂಚಾಯ್ತಿ ಸದಸ್ಯೆ ಭವಾನಿ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದರು.ಪಟ್ಟಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು ನೀವು ಇದನ್ನು ನಿಯಂತ್ರಿಸಿ ಎಂದು ಸ್ಥಳದಲ್ಲಿದ್ದ ನಗರಠಾಣೆ ಪಿಎಸ್‌ಐ ಕುಮಾರ್‌ಗೆ ಸೂಚಿಸಿದರು.

ಹೆಚ್ಚಿರುವ ಪುಂಡರಹಾವಳಿ: ಪಟ್ಟಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು ಯುವತಿಯರು ಶಾಲಾಕಾಲೇಜಿಗೆ ಹೋಗಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಿದ್ಯಾರ್ಥಿನಿಯರು ಶಾಲಾ ಕಾಲೇಜಿಗೆ ಹೋಗುವ  ಸಮಯದಲ್ಲಿ ಬೈಕ್‌ಗಳೊಂದಿಗೆ ರಸ್ತೆಗೆ ಇಳಿಯುವ ಪುಂಡರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಬಸ್‌ನಿಲ್ದಾಣದಲ್ಲೂ ಪುಂಡರು ಕಿರುಕುಳ ನೀಡುತ್ತಿದ್ದು ಪೊಲೀಸರು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Post Comments (+)