ಅತಿವೃಷ್ಟಿ ಪರಿಹಾರ: ₹ 27 ಕೋಟಿ ಬಿಡುಗಡೆ

7
ವಾರದೊಳಗೆ ಕ್ರಿಯಾಯೋಜನೆ ಸಲ್ಲಿಸಲು ಡಿ.ಸಿ ಸೂಚನೆ

ಅತಿವೃಷ್ಟಿ ಪರಿಹಾರ: ₹ 27 ಕೋಟಿ ಬಿಡುಗಡೆ

Published:
Updated:
Deccan Herald

ಹಾಸನ: ಅತಿವೃಷ್ಟಿ ಹಾನಿ ಪೀಡಿತ ತಾಲ್ಲೂಕುಗಳಲ್ಲಿ ಪರಿಹಾರ ಕಾಮಗಾರಿಗೆ ₹ 27.94 ಕೋಟಿ ಬಿಡುಗಡೆಯಾಗಿದ್ದು, ವಾರದೊಳಗೆ ಕ್ರಿಯಾಯೋಜನೆಯನ್ನು ಇಲಾಖಾವಾರು ಸಲ್ಲಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಟಿ ಪರಿಹಾರ ಕುರಿತು ಸಭೆ ನಡೆಸಿದ ಅವರು, ಈಗಾಗಲೇ ಮಳೆ ಹಾನಿ ಕುರಿತು ಇಲಾಖಾವಾರು ಅಂದಾಜಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹಾಲಿ ಬಿಡುಗಡೆಯಾಗಿರುವ ಮೊತ್ತಕ್ಕೆ ಕೇಂದ್ರ ರಾಷ್ಟ್ರೀಯ ವಿಪತ್ತು ನಿಧಿ ಮಾರ್ಗಸೂಚಿ ಅನ್ವಯ ಕ್ರಿಯಾಯೋಜನೆ ಸಿದ್ದಪಡಿಸಿ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಕಲೇಶಪುರ, ಆಲೂರು, ಅರಕಲಗೂಡು ಹಾಗೂ ಹೊಳೆನರಸೀಪುರ ತಾಲ್ಲೂಕುಗಳನ್ನು ಮಳೆಹಾನಿ ಪೀಡಿತ ಪ್ರದೇಶಗಳೆಂದು ಗುರುತಿಸಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ₹ 12.68 ಕೋಟಿ, ಲೋಕೋಪಯೋಗಿ ಇಲಾಖೆಗೆ ₹ 10.57 ಕೋಟಿ, ಇಂಧನ ಇಲಾಖೆಗೆ ₹ 0.94 ಲಕ್ಷ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿವಾರು ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ದಗೊಳ್ಳಬೇಕು. ಸಕಲೇಶಪುರ, ಅಲೂರು, ಅರಕಲಗೂಡು, ಹೊಳೆನರಸೀಪುರ ತಾಲ್ಲೂಕುಗಳಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ತಮ್ಮ ಪಂಚಾಯಿತಿಗಳಲ್ಲಿ ಮನವಿ ಸಲ್ಲಿಸಬಹುದು. ಇದಕ್ಕಾಗಿ ಒಂದು ವಾರ ಸಮಯ ಇದ್ದು, ಆನಂತರ ಗ್ರಾಮ ಪಂಚಾಯಿತಿವಾರು ಕ್ರಿಯಾ ಯೋಜನೆ ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.

ಒಟ್ಟಾರೆ 7 ಜಿಲ್ಲೆಗಳಲ್ಲಿ ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ₹ 200 ಕೋಟಿ ಬಿಡುಗಡೆ ಮಾಡಲಾಗಿದೆ. ಸಂಬಂಧಪಟ್ಟ ಇಲಾಖೆಗಳು ಕೂಡಲೇ ಅಗತ್ಯ ಪರಿಹಾರ ಕಾರ್ಯಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ನೆರೆ ಪೀಡಿತ ಪ್ರದೇಶಗಳೆಂದು ಪರಿಗಣಿಸಲಾಗಿದೆ.

ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಸಕಲೇಶಪುರ ಭಾಗದಲ್ಲಿ ಲೋಕೊಪಯೋಗಿ ಇಲಾಖೆ ರಸ್ತೆಗಳು ಹೆಚ್ಚಿನ ಹಾನಿಗೀಡಾಗಿದ್ದು, ಸರಿಯಾಗಿ ಅಂದಾಜಿಸಿ ಅಷ್ಟು ವ್ಯಾಪ್ತಿಯ ಮಾರ್ಗ ದುರಸ್ತಿಗೆ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !