ಸೋಮವಾರ, ಆಗಸ್ಟ್ 26, 2019
21 °C
ಜಿಲ್ಲೆಯಲ್ಲಿ 24 ಮನೆಗಳಿಗೆ ಭಾಗಶಃ ಹಾನಿ

ಆಜಾದ್‌ ರಸ್ತೆ ಮುಳುಗಡೆ

Published:
Updated:

ಹಾಸನ: ಜಿಲ್ಲೆಯಲ್ಲಿ ಗುರುವಾರವೂ ಮಳೆ ಆರ್ಭಟ ಮುಂದುವರಿದಿದ್ದು, ಈ ವರೆಗೂ 24 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 

ಅರಕಲಗೂಡು ಪಟ್ಟಣದ ಸಾಲಗೇರಿ ಬಡಾವಣೆ, ಮಗ್ಗೆ, ಕೊಣನೂರು ಹೋಬಳಿಯಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾಸನ ನಗರದ ಸಲೀಂ ಹಾಗೂ ಚಿಪ್ಪಿನಕಟ್ಟೆಯಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ.

ಹೇಮಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬಹುತೇಕ ತಗ್ಗು ಪ್ರದೇಶ ಜಲಾವೃತವಾಗಿದೆ. ಸಕಲೇಶಪುರ ಪಟ್ಟಣದ ಆಜಾದ್ ರಸ್ತೆ ಬಹುತೇಕ ಮುಳುಗಡೆಯಾಗಿ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಮನೆ ಹಾಗೂ ಅಂಗಡಿ ಮಳಿಗೆ ಮುಳುಗಿ ಹೋಗಿವೆ. ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಹೊಳೆ ಮಲ್ಲೇಶ್ವರ ದೇವಾಲಯ ಮುಳುಗಿದೆ. ಗುಡಾನೆ ಕೆರೆ–ಹೆಗ್ಗೆದ್ದೆ ಮಾರ್ಗದಲ್ಲಿ ಭೂಕುಸಿತ ಉಂಟಾಗಿ, ರಸ್ತೆ ಬಂದ್ ಆಗಿದೆ. ಹೇಮಾವತಿ ನದಿಯಲ್ಲಿ 48.133 ಕ್ಯುಸೆಕ್‌ ನೀರು ಹರಿಯುತ್ತಿದೆ. 

ಚಾರ್ಮಾಡಿಘಾಟ್ ಬಂದ್ ಆಗಿರುವುದರಿಂದ ಎಲ್ಲಾ ವಾಹನಗಳೂ ಶಿರಾಡಿ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ಸಕಲೇಶಪುರದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಶಿರಾಡಿಭಾಗದಲ್ಲಿ ಮತ್ತೆ ಭೂ ಕುಸಿತದ ಭೀತಿ ಎದುರಾಗಿದೆ. ಸಕಲೇಶಪುರ ಶಿರವಾಗಿಲು ನಡುವೆ ಭೂ ಕುಸಿತ ಉಂಟಾಗಿರುವುದರಿಂದ ರೈಲು ಸಂಚಾರ ಬಂದ್ ಆಗಿದೆ. ಇದೇ ರೀತಿ ಆಲೂರು ಬೇಲೂರಲ್ಲೂ ಮಳೆ ಆರ್ಭಟ ಜೋರಾಗಿದೆ.

ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂಸದ ಪ್ರಜ್ವಲ್ ರೇವಣ್ಣ, ರಾಜ್ಯ ಮತ್ತು ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಆಲೂರು, ಸಕಲೇಶಪುರ, ಹಾಸನ, ಅರಕಲಗೂಡು, ಬೇಲೂರು, ಹೊಳೆನರಸೀಪುರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

Post Comments (+)