ಜೆಡಿಎಸ್‌ ಬಿಜೆಪಿಯ ಬಿ ಟೀಂ ಕಪ್ಪು ಚುಕ್ಕೆ ಅಳಿಸುವೆ: ಎಚ್.ಡಿ.ದೇವೇಗೌಡ

7
ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ದೇವೇಗೌಡ

ಜೆಡಿಎಸ್‌ ಬಿಜೆಪಿಯ ಬಿ ಟೀಂ ಕಪ್ಪು ಚುಕ್ಕೆ ಅಳಿಸುವೆ: ಎಚ್.ಡಿ.ದೇವೇಗೌಡ

Published:
Updated:
Prajavani

ಹಾಸನ: ‘ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂಬ ಕಪ್ಪು ಚುಕ್ಕೆಯನ್ನು ಅಳಿಸುತ್ತೇನೆ. ಅದಕ್ಕಾಗಿ ಇದೇ 17ರಂದು ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ಏರ್ಪಡಿಸಲಾಗುವುದು’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಗರದ ಗೋಮತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬಿ ಟೀಂ ಎಂದು ಹೇಳಲಿಲ್ಲ. ಯಾರೋ ಬರೆದು ಕೊಟ್ಟಿದ್ದನ್ನು ಓದಿದರು. ಅರಮನೆ ಮೈದಾನದಲ್ಲಿ ಒಂದು ಲಕ್ಷ ಮುಸ್ಲಿಮರನ್ನು ಸೇರಿಸಿ, ನಮ್ಮ ಪಕ್ಷ ಅಲ್ಪ ಸಂಖ್ಯಾತರಿಗೆ ಏನು ಮಾಡಿದೆ ಎಂಬುದನ್ನು ತಿಳಿಸಲಾಗುವುದು. ಇದೇ 29, 30 ರಂದು ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲಾಗುವುದು. ಅದಾದ ಬಳಿಕ ಮಹಿಳಾ ಸಮಾವೇಶ ನಡೆಸಲಾಗುವುದು’ ಎಂದು ತಿಳಿಸಿದರು.

‘ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್‌ ಕಣಕ್ಕಿಳಿಸಬೇಕೆಂಬ ಒತ್ತಾಯ ಇದೆ. ಚುನಾವಣೆ ಘೋಷಣೆಗೂ ಮುನ್ನ ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರ ಅಭಿಪ್ರಾಯ ಪಡೆದು ಅಭ್ಯರ್ಥಿ ಘೋಷಿಸಲಾಗುವುದು’ ಎಂದು ಸ್ಪಷ್ಟ ಪಡಿಸಿದರು.

‘ಜೆಡಿಎಸ್‌ ಅಧಿಕಾರಕ್ಕಾಗಿ ಎಲ್ಲಾದಕ್ಕೂ ರಾಜಿಯಾಗುತ್ತದೆ ಎಂಬ ಭಾವನೆ ಸರಿಯಲ್ಲ. ಮೈತ್ರಿ ಸರ್ಕಾರದಲ್ಲಿ ಮಾತುಗಳು ಬರುವುದು ಸಹಜ. ಆದರೆ, ನರೇಂದ್ರ ಮೋದಿ ಅದನ್ನು ಬೇರೆ ರೀತಿ ವ್ಯಾಖ್ಯಾನ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ’ ಎಂದು ಗೌಡರು ಹೇಳಿದರು.

‘ಮಾತಿನ ಚಾತುರ್ಯತೆಯಿಂದ ಮೋದಿ ದೇಶದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ನಾಲ್ಕು ಮುಕ್ಕಾಲು ವರ್ಷ ಏನು ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಏನು ಬೇಕಾದರೂ ಹೇಳಬಹುದು ಅಂದುಕೊಂಡಿದ್ದಾರೆ. 37 ಸ್ಥಾನ ಇರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ₹ 46 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಎದೆಗಾರಿಕೆ ಯಾರಿಗೆ ಇದೆ’ ಎಂದು ಪ್ರಶ್ನಿಸಿದರು.

‘ಶೇ 10 ರಷ್ಟು ಮೇಲ್ಜಾತಿಗೆ ಮೀಸಲಾತಿ ನೀಡುವುದಾಗಿ ಕೇಂದ್ರ ಹೇಳಿದೆ. ರಾಜ್ಯದಲ್ಲಿ ಶೇ 2 ರಿಂದ 3 ರಷ್ಟು ಬ್ರಾಹ್ಮಣರು, ಶೇ 18 ರಷ್ಟು ಲಿಂಗಾಯತರು, ಶೇ 14ರಷ್ಟು ಒಕ್ಕಲಿಗರಿದ್ದಾರೆ. ಇದನ್ನು ಹೇಗೆ ವರ್ಗಿಕರೀಸಲಾಗುತ್ತದೆ. ಇದರ ಬಗ್ಗೆ ಯಾವ ಪಕ್ಷಗಳು ಚರ್ಚೆ ನಡೆಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಹಿಂದೆ ಲೂಟಿ ಮಾಡಿದ ಪ್ರಾದೇಶಿಕ ಪಕ್ಷಗಳು ಮುಂದೆ ಆಗುವ ಶಿಕ್ಷೆ ತಪ್ಪಿಸಿಕೊಳ್ಳಲು ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂದು ಬಿಜೆಪಿ ಟೀಕಿಸಿದೆ. ಉನ್ನತ ಸ್ಥಾನದಲ್ಲಿರುವ ಮೋದಿ ಎಚ್ಚರಿಕೆಯಿಂದ ಪದ ಪ್ರಯೋಗ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್‌ ಅತಿ ದೊಡ್ಡ ಭ್ರಷ್ಟ ಪಕ್ಷ ಎಂದು ಬಿಂಬಿಸಿಕೊಂಡು ಬಂತು. ಅಧಿಕಾರಕ್ಕೆ ಬಂದ ಬಿಜೆಪಿ ಮಾಡಿದ ಸಾಧನೆಯಾದರೂ ಏನು’ ಎಂದು ವ್ಯಂಗ್ಯವಾಡಿದರು. ‘ಲೋಕಸಭಾ ಚುನಾವಣೆ ಸಂಬಂಧ ಸೀಟು ಹಂಚಿಕೆ ನಂತರ ಅಭ್ಯರ್ಥಿಗಳ ಪರವಾಗಿ ಕಾಂಗ್ರೆಸ್, ಜೆಡಿಎಸ್‌ ಜಂಟಿ ಪ್ರಚಾರ ನಡೆಸಲಿವೆ’ ಎಂದರು,

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !