ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ 1,042ನೇ ಪ್ರತಿಷ್ಠಾಪನಾ ಮಹೋತ್ಸವ

Last Updated 6 ಏಪ್ರಿಲ್ 2022, 12:42 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಇಲ್ಲಿಯ ವಿಂಧ್ಯಗಿರಿಯ ದೊಡ್ಡಬೆಟ್ಟದಲ್ಲಿರುವ ಪ್ರಥಮ ಮೋಕ್ಷಗಾಮಿ ಬಾಹುಬಲಿಯ 1,042ನೇ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿವಿಧಾನಗಳನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ಮಂಗಲ ವಾದ್ಯಗಳು ಮೊಳಗುತ್ತಿದ್ದಂತೆ ಬಾಹುಬಲಿಯ ಪಾದಗಳಿಗೆ ಜಲ, ಎಳನೀರು, ಕಬ್ಬಿನಹಾಲು, ಕ್ಷೀರ, ಕಲ್ಕಚೂರ್ಣ, ಅರಿಸಿನ, ಅಷ್ಟಗಂಧ, ಮಲೆಯೂರು ಚಂದನ, ಕಷಾಯಗಳಿಂದ ಅಭಿಷೇಕ, ನಂತರ ಪುಷ್ಪವೃಷ್ಟಿಯಾಯಿತು.

ಲೋಕ ಕಲ್ಯಾಣಾರ್ಥವಾಗಿ ಪ್ರತಿಷ್ಠಾಪಿಸಿದ್ದ ಕಲಶದಿಂದ ಮಹಾಶಾಂತಿಧಾರಾ ನೆರವೇರಿತು. ಬಾಹುಬಲಿಯ ಮುಂಭಾಗ ಪ್ರತಿಷ್ಠಾಪಿಸಿದ್ದ ಬಾಹುಬಲಿ ಮೂರ್ತಿಗೆ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಲವಂಗ ಹಾಗೂ ನವರತ್ನಗಳ ಅಭಿಷೇಕ ನೆರವೇರಿಸಿದರು.

ಬಾಹುಬಲಿಯ ಚರಣಗಳಿಗೆ ಅಷ್ಟದ್ರವ್ಯಗಳಾದ ಅಷ್ಟವಿಧಾರ್ಚನೆಯನ್ನು ಪ್ರತ್ಯೇಕವಾಗಿ 8 ಜನರ ತಂಡದ ಶ್ರಾವಕ ಶ್ರಾವಕಿಯರು ಏಕಕಾಲದಲ್ಲಿ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲ ಅರ್ಪಿಸಿ ಮಂಗಳ ವಾಧ್ಯಗಳೊಂದಿಗೆ ಮಹಾ ಅರ್ಘ್ಯ ಸಮರ್ಪಿಸಲಾಯಿತು. ಮಹಾ ಮಂಗಳಾರತಿಯೊಂದಿಗೆ ಜಯಮಾಲಾರ್ಘ್ಯ ಸಮರ್ಪಿಸಲಾಯಿತು.ಭಕ್ತರಿಗೆ ಗಂಧೋದಕ ವಿತರಿಸಲಾಯಿತು.

ಗುರುಗಳ ಪೀಠಕ್ಕೆ ಪೂಜೆ ಸಲ್ಲಿಸಿದ ನಂತರ ಕ್ಷೇತ್ರಪಾಲ, ಬ್ರಹ್ಮ ದೇವರಿಗೆ ಮತ್ತು ಗುಳ್ಳಕಾಯಜ್ಜಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ಮಾಡಲಾಯಿತು. ಪೂಜೆಯ ನೇತೃತ್ವವನ್ನು ಪ್ರತಿಷ್ಠಾಚಾರ್ಯ ಎಸ್‌.ಪಿ.ಜಿನೇಶ್‌, ಎಸ್‌.ಡಿ.ನಂದಕುಮಾರ್‌ ಶಾಸ್ತ್ರಿ, ಶಾಂತಕುಮಾರ್‌ ರತನ್‌, ಚಂದ್ರಕುಮಾರ್‌ ವಹಿಸಿದ್ದರು.

ಸಾನಿಧ್ಯ ವಹಿಸಿದ್ದ ಯುಗಲ ಮುನಿಗಳಾದ ಅಮೋಘಕೀರ್ತಿ ಮಹಾರಾಜ್‌ ಆಶೀರ್ವಚನ ನೀಡಿ, ‘ಗಂಗ ವಂಶದ ದಂಡನಾಯಕ ಚಾವುಂಡರಾಯನಿಂದ ಕ್ರಿ.ಶ. 981ರಲ್ಲಿ ನಿರ್ಮಿಸಲ್ಪಟ್ಟ ವೈರಾಗ್ಯ ಮೂರ್ತಿ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನಾ ದಿನವನ್ನು ಇಂದು ಶಿಲ್ಪಿ ಅರಿಷ್ಠನೇಮಿ ಸ್ಮರಣೆಯನ್ನು ಮಾಡುತ್ತಾ ಆಚರಿಸುತ್ತಿದ್ದೇವೆ’ ಎಂದು ಹೇಳಿದರು.

‘ಅನೇಕ ಸೇನಾಧಿಪತಿಗಳು, ತ್ಯಾಗಿಗಳು, ಆಚರಿಸಿಕೊಂಡು ಬರುತ್ತಿದ್ದ ಪರಂಪರೆಯಂತೆ ಕ್ಷೇತ್ರದಲ್ಲಿ ಇಂದು ಚೈತ್ರಶುದ್ಧ, ಪಂಚಮಿಯ ದಿನದಂದು ಪ್ರತಿಷ್ಠಾಪನಾ ಮಹೋತ್ಸವದ ಪಾದಪೂಜೆಯಾಗಿ ನೆರವೇರಿಸಲಾಗುತ್ತಿದೆ. ವಿಶ್ವಕ್ಕೆ ಬಾಹುಬಲಿಯ ಅಹಿಂಸೆ ಮತ್ತು ತ್ಯಾಗ ಸಂದೇಶಗಳಾದ ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ’ ಎಂದರು.

ಅತಿಶಯವಾದ ಅಖಂಡ ಭವ್ಯ ಮೂರ್ತಿ ನಿರ್ಮಿಸಿದ್ದೇ ಎಂಬ ಅಹಂಕಾರ ಚಾವುಂಡರಾಯನಿಗೆ ಬಂದಿದ್ದರಿಂದ ಅಪೂರ್ಣಗೊಂಡ ಮಹಾಮಸ್ತಕಾಭಿಷೇಕವನ್ನು ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿ ಗುಳ್ಳಕಾಯಜ್ಜಿ ಗುಳ್ಳದಲ್ಲಿ ಕ್ಷೀರ ತಂದು ಅಭಿಷೇಕ ಮಾಡಿದಾಗ ಪೂರ್ಣಗೊಂಡಿತು ಎಂದು ಸ್ಮರಿಸಿದರು.

ಅಮರಕೀರ್ತಿ ಮಹಾರಾಜರು, ಆರ್ಯಿಕೆ ಶಿವಮತಿ ಮಾತಾಜಿ, ಕ್ಷುಲ್ಲಿಕಾ ಅಮರಜ್ಯೋತಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.

ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ್‌, ಸದಸ್ಯರಾದ ದೇವೇಂದ್ರಕುಮಾರ್‌, ಎಸ್‌.ಬಿ.ಯಶಸ್‌ ಇದ್ದರು.

ವಿಂಧ್ಯಗಿರಿ ಬೆಟ್ಟದಲ್ಲಿರುವ ಒಳಭಾಗ ಹಾಗೂ ಮುಂಭಾಗವನ್ನು ಹಸಿರು ತೋರಣ, ಹೂವು, ಪಂಚರಂಗಿ ಧರ್ಮಧ್ವಜಗಳಿಂದ ಅಲಂಕರಿಸಲಾಗಿತ್ತು. ಭಾಗವಹಿಸಿದ್ದ ಎಲ್ಲರಿಗೂ ಕಬ್ಬಿನಹಾಲು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT