ಸೋಮವಾರ, ಏಪ್ರಿಲ್ 6, 2020
19 °C
ಹಸು ಸಾಕಾಣಿಕೆಯಲ್ಲಿ ಯಶಸ್ಸಿನ ಮೆಟ್ಟಿಲೇರಿದ ಎಂಎಸ್ಸಿ ಪದವೀಧರೆ ಪ್ರತಿಭಾ

ಬದುಕು ಹಸನಾಗಿಸಿದ ಹೈನೋದ್ಯಮ

ಕೆ.ಎಸ್.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜೀವನದಲ್ಲಿ ಅಡೆತಡೆ ಎದುರಾದರೂ ಕನಸುಗಳನ್ನು ಪೋಷಿಸಿ, ಅವುಗಳನ್ನು ಸಾಧಿಸಿ ಇತರರಿಗೂ ಮಾರ್ಗದರ್ಶಿಯಾದ ಮಹಿಳೆಯರು ಸಾಕಷ್ಟಿದ್ದಾರೆ. ಹಳ್ಳಿಯಲ್ಲಿ ಭವಿಷ್ಯ ಇಲ್ಲವೆಂಬ ಕಾರಣಕ್ಕೆ ಪಟ್ಟಣ ಸೇರುವ ಯುವ ಜನರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಯುವತಿಯೊಬ್ಬರು ಕಾರ್ಪೊರೇಟ್‌ ಕಂಪನಿಯಲ್ಲಿದ್ದ ಸಾವಿರಾರು ರೂಪಾಯಿ ವೇತನದ ಉದ್ಯೋಗ ತ್ಯಜಿಸಿ ‘ಹೈನುಗಾರಿಕೆಯಲ್ಲಿ’ ತೊಡಗಿಸಿಕೊಂಡು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಸದ್ಯ ಇವರು 50 ಹಸುಗಳ ಒಡತಿ.

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜ್ಯೋತಿ ಮಲ್ಲಾಪುರದ ಕೆ.ಬಿ.ಪ್ರತಿಭಾ ಅವರ ಯಶೋಗಾಥೆ ಇದು.

ಹೈನುಗಾರಿಕೆಯನ್ನು ಲಾಭದಾಯಕ ಉದ್ದಿಮೆಯಾಗಿ ಮಾಡಿಕೊಂಡಿರುವ ಪ್ರತಿಭಾ ಕಲಿತದ್ದು ಎಂಎಸ್ಸಿ ರಾಸಾಯನ ವಿಜ್ಞಾನ. ಆರಂಭದಲ್ಲಿ ನಾಲ್ಕು ವರ್ಷ ಕಾರ್ಪೊರೇಟ್‌ ಕಂಪನಿಯಲ್ಲಿ ಆಹಾರ ಸಂಸ್ಕರಣ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಉನ್ನತ ಹುದ್ದೆಯಲ್ಲಿದ್ದರೂ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಮಹಾದಾಸೆ ಹೊಂದಿದ್ದರು. ಆ ಕೃಷಿ ಸೆಳೆತ ಅವರನ್ನು ಹಳ್ಳಿಯತ್ತ ಸೆಳೆಯಿತು.

ತಂದೆ ಬಸವರಾಜು ಕೃಷಿಕರು. ಅವರಿಗೆ 2.5 ಎಕರೆ ಜಮೀನು ಇತ್ತು. ಹಳ್ಳಿಗೆ ಮರಳಿದ ಪ್ರತಿಭಾ, ಸ್ನೇಹಿತರ ಜತೆ ಚರ್ಚಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸಿನ ಮೆಟ್ಟಿಲೇರಿದರು. ಈಗ ಅವರು ಮಾರುತಿ ಡೇರಿ ಫಾರ್ಮ್‌ ಮಾಲೀಕರು.

2.5 ಎಕರೆ ಜಮೀನಿನ ಜತೆಗೆ 30 ಎಕರೆ ಜಮೀನು ಗುತ್ತಿಗೆ ಮಾಡಿಕೊಂಡಿದ್ದಾರೆ. ಅದರಲ್ಲಿ 4 ಎಕರೆ ದಾಳಿಂಬೆ, 10 ಎಕರೆ ಮೆಕ್ಕೆ ಜೋಳ, 3 ಎಕರೆ ನೇಪಿಯರ್‌ ಮೇವು, 12 ಎಕೆರೆಯಲ್ಲಿ ಆಲ್ಫಾ ಮೇವು ಬೆಳೆದು, ಮೇವಿನ ಕೊರತೆಯನ್ನು ನೀಗಿಸಿದ್ದಾರೆ.

ಪ್ರಸ್ತುತ ಎಚ್ಎಫ್‌ ತಳಿಯ 50 ಹಸುಗಳು ಇವೆ. ವರ್ಷಕ್ಕೆ ಮೂರು ಬಾರಿ ಲಸಿಕೆ ನೀಡಲಾಗುತ್ತದೆ. ಪ್ರತಿ ದಿನ 300 ಲೀಟರ್‌ ಹಾಲು ಉತ್ಪಾದನೆ ಆಗುತ್ತಿದೆ. ಹಾಲನ್ನು ‌‌ತಿಪಟೂರಿನ ಅಕ್ಷಯ ಕಲ್ಪ ಡೇರಿಗೆ ಮಾರಾಟ ಮಾಡುತ್ತಿದ್ದಾರೆ. ಕೆಲಸಕ್ಕೆ 10 ಮಂದಿ ಇದ್ದಾರೆ. ಇವರ ಸ್ನೇಹಿತರಾದ ಮೆಕಾನಿಕಲ್‌ ಎಂಜಿನಿಯರ್‌ಗಳಾದ ರಾಜು, ಗೋಪಾಲಕೃಷ್ಣ ಕೃಷಿ ಉದ್ಯಮದಲ್ಲಿ ಕೈ ಜೋಡಿಸಿದ್ದಾರೆ. ಇವರ ಫಾರ್ಮ್‌ ಭೇಟಿಗೆ ಪ್ರವೇಶ ಶುಲ್ಕ ₹ 500 .

2009ರಲ್ಲಿ ಡೇರಿ ಆರಂಭಿಸಿದಾಗ ಇದ್ದ ಹಸುಗಳ ಸಂಖ್ಯೆ 5, 2019ರ ವೇಳೆಗೆ 200 ತಲುಪಿತ್ತು. ದಿನಕ್ಕೆ 1500 ರಿಂದ 2000 ಲೀಟರ್‌ ಹಾಲು ಉತ್ಪಾದನೆಯಾಗುತ್ತಿತ್ತು. ಮೇವಿನ ಕೊರತೆಯಿಂದ ಕ್ರಮೇಣ ಹಸುಗಳ ಸಂಖ್ಯೆ ಕಡಿಮೆ ಆಗತೊಡಗಿತು. ಹೈನುಗಾರಿಕೆ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ 12 ದಿನ ಜಪಾನ್‌ ಪ್ರವಾಸ ಕೈಗೊಂಡು, ಅಲ್ಲಿನ ಕೃಷಿ ತಜ್ಞರ ಜತೆ ಪ್ರತಿಭಾ ಸಮಾಲೋಚನೆ ನಡೆಸಿ ಬಂದಿದ್ದಾರೆ.

ಪ್ರತಿಭಾ ಅವರ ಸಾಧನೆ ಗುರುತಿಸಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರಗತಿ ಪರ ಕೃಷಿಕ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ, ಜಿಲ್ಲಾ, ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು