ಶ್ರವಣಬೆಳಗೊಳ: ಬಾಹುಬಲಿ ಸ್ವಾಮಿ 1039ನೇ ಪ್ರತಿಷ್ಠಾಪನಾ ಮಹೋತ್ಸವ

ಮಂಗಳವಾರ, ಏಪ್ರಿಲ್ 23, 2019
25 °C

ಶ್ರವಣಬೆಳಗೊಳ: ಬಾಹುಬಲಿ ಸ್ವಾಮಿ 1039ನೇ ಪ್ರತಿಷ್ಠಾಪನಾ ಮಹೋತ್ಸವ

Published:
Updated:
Prajavani

ಶ್ರವಣಬೆಳಗೊಳ: ಇತಿಹಾಸ ಪ್ರಸಿದ್ಧ ವಿಂಧ್ಯಗಿರಿಯ ದೊಡ್ಡ ಬೆಟ್ಟದಲ್ಲಿ ಬಾಹುಬಲಿಸ್ವಾಮಿಯ 1039ನೇ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಪಾದಪೂಜೆ ಬುಧವಾರ ನೆರವೇರಿತು.

ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಪ್ರತಿಷ್ಠಾಪಿಸಲ್ಪಟ್ಟ 9 ರಜತ ಕಲಶಗಳಿಂದ ಜಲಾಭಿಷೇಕ ನೆರವೇರಿಸಿ, ಕ್ಷೀರ, ಶ್ರೀಗಂಧದಿಂದ ಪಾದಪೂಜೆ, ಮೂರ್ತಿಯ ಮುಂದೆ ಪ್ರತಿಷ್ಠಾಪಿಸಲ್ಪಟ್ಟ ಬಾಹುಬಲಿ ಮೂರ್ತಿಗೆ ಮಾವಿನ ಹಣ್ಣಿನ ರಸದಿಂದ ಅಭಿಷೇಕ ನೆರವೇರಿಸಿ, ವಿವಿಧ ಪುಷ್ಪವೃಷ್ಠಿ ಮಾಡಲಾಯಿತು.

ನಂತರ ಚಾರುಕೀರ್ತಿ ಶ್ರೀಗಳು ಮತ್ತು ಗಣಿನಿ ಆರ್ಯಿಕಾ ವಿಶಾಶ್ರೀ ಮಾತಾಜಿ ಮತ್ತು ಸಂಘಸ್ಥ ತ್ಯಾಗಿಗಳು ಲವಂಗ ಮತ್ತು ನವರತ್ನಗಳನ್ನು ಬಾಹುಬಲಿಯ ಪಾದಕ್ಕೆ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಸರ್ವ ಲೋಕಕ್ಕೂ ಶಾಂತಿ ಬಯಸುವ ಶಾಂತಿಧಾರೆಯನ್ನು ನೆರವೇರಿಸಲಾಯಿತು.

ಬಾಹುಬಲಿ ಸ್ವಾಮಿಗೆ ಅಷ್ಟವಿಧಾರ್ಚನೆಯೊಂದಿಗೆ 108 ವಿವಿಧ ಅರ್ಘ್ಯಗಳನ್ನು, ದಶ ದಿಕ್ಪಾಲಕರಿಗೆ 16 ಅರ್ಘ್ಯಗಳನ್ನು ಅರ್ಪಿಸಿದ ನಂತರ ಮಹಾಮಂಗಳಾರತಿ ನೆರವೇರಿತು.

ಒದೆಗಲ್‌ ಬಸದಿಯಲ್ಲಿ ಪ್ರಥಮ ತೀರ್ಥಂಕರ ಆದಿನಾಥ ಸ್ವಾಮಿಗೆ ನವ ಕಲಶಾಭಿಷೇಕ ಪೂಜೆಯೊಂದಿಗೆ ಭಕ್ತಾಮರ ಆರಾಧನೆ, ಬ್ರಹ್ಮಯಕ್ಷ ಮತ್ತು ಯಕ್ಷಿಶ್ರೀ ಕೂಷ್ಮಾಂಡಿನಿ ಅಮ್ಮನವರಿಗೆ ಷೋಡಶೋಪಚಾರ ಪೂಜೆ ನೆರವೇರಿತು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ‘ಗಂಗ ವಂಶದ ದಂಡನಾಯಕ ಚಾವುಂಡರಾಯನಿಂದ ಕ್ರಿ.ಶ. 981ರಲ್ಲಿ ನಿರ್ಮಿಸಲ್ಪಟ್ಟ ವೈರಾಗ್ಯಮೂರ್ತಿ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನಾ ದಿನವನ್ನು ಇಂದು ಶಿಲ್ಪಿ ಅರಿಷ್ಠನೇಮಿ ಸ್ಮರಣೆಯನ್ನು ಮಾಡುತ್ತಾ ಆಚರಿಸುತ್ತಿದ್ದೇವೆ. ಅನೇಕ ಸೇನಾಧಿಪತಿಗಳು, ತ್ಯಾಗಿಗಳು, ಆಚರಿಸಿಕೊಂಡು ಬರುತ್ತಿದ್ದ ಪರಂಪರೆಯಂತೆ ಕ್ಷೇತ್ರದಲ್ಲಿ ಇಂದು ಚೈತ್ರ ಶುದ್ಧ ಪಂಚಮಿಯ ಮೃಗಶಿರಾ ನಕ್ಷತ್ರದ ದಿನದಂದು ಪ್ರತಿಷ್ಠಾಪನಾ ಮಹೋತ್ಸವದ ಪಾದಪೂಜೆ ನೆರವೇರಿಸುತ್ತಿದ್ದೇವೆ ಎಂದು ಹೇಳಿದರು.

ವಿಶ್ವಕ್ಕೆ ಬಾಹುಬಲಿಯ ಅಹಿಂಸೆ ಮತ್ತು ತ್ಯಾಗ ಸಂದೇಶಗಳಾದ ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಅತಿಶಯವಾದ ಅಖಂಡ ಭವ್ಯ ಮೂರ್ತಿ ನಿರ್ಮಿಸಿದ್ದೇ ಎಂಬ ಅಹಂಕಾರ ಚಾವುಂಡರಾಯನಿಗೆ ಬಂದಿದ್ದರಿಂದ ಅಪೂರ್ಣಗೊಂಡ ಮಹಾಮಸ್ತಕಾಭಿಷೇಕವನ್ನು ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿ ಗುಳ್ಳುಕಾಯಜ್ಜಿ ರೂಪದಲ್ಲಿ ಗುಳ್ಳದಲ್ಲಿ ಕ್ಷೀರ ತಂದು ಅಭಿಷೇಕ ಮಾಡಿದಾಗ ಪೂರ್ಣಗೊಂಡಿದ್ದನ್ನು ಸ್ಮರಿಸಿಕೊಂಡರು.

ಬಾಹುಬಲಿ ಸ್ವಾಮಿಯ ಪಾದಗಳ ಸುರಕ್ಷತೆಯ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ಪ್ರತಿ ಭಾನುವಾರ ಮತ್ತು ವಿಶೇಷ ದಿನಗಳಲ್ಲಿ ಮಾತ್ರ ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ಪ್ರತಿದಿನ ಜಲಾಭಿಷೇಕ ಮಾತ್ರ ನೆರವೇರಿಸಲಾಗುವುದು ಎಂದು ಹೇಳಿದರು.

ಮಹಾಮಸ್ತಕಾಭಿಷೇಕ ಸಂದರ್ಭ ದಲ್ಲಿ ಅನೇಕ ದ್ರವ್ಯಗಳಿಂದ ಪೂಜೆ ನೆರವೇರಿಸಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯವು ಸ್ವಚ್ಛತೆಯನ್ನು ಕೈಗೊಂಡು ಮೂರ್ತಿ ಮತ್ತೆ ಸುಂದರ ವಾಗಿ ಕಾಣುವಂತೆ ಮಾಡಿದ್ದಾರೆ ಎಂದು ಇಲಾಖೆಯ ಸೇವೆಯನ್ನು ಶ್ಲಾಘಿಸಿದರು.

ಪೂಜೆಯ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಎಸ್‌.ಪಿ.ಉದಯಕುಮಾರ್‌, ಎಸ್‌.ಡಿ.ನಂದಕುಮಾರ್‌ ತಂಡ ನೆರವೇರಿಸಿದರು. ಸ್ಯಾಕ್ಸೊಫೋನ್‌ ಸಂಗೀತ ಸೇವೆಯನ್ನು ಎಸ್‌.ಎ.ಗುರುಮೂರ್ತಿ ತಂಡ ನೆರವೇರಿಸಿದರು.

ವಿಂಧ್ಯಗಿರಿಯ ಬೆಟ್ಟವನ್ನು ಮಾವಿನ ತೋರಣ, ಬಾಳೆದಿಂಡು, ಕಬ್ಬಿನಜಲ್ಲೆ, ಹೂಗಳಿಂದ ಧರ್ಮಧ್ವಜಗಳಿಂದ ಅಲಂಕರಿಸಲಾಗಿತ್ತು. ಆಗಮಿಸಿದ್ದ ಭಕ್ತರಿಗೆ ಕ್ಷೇತ್ರದ ವತಿಯಿಂದ ಕಬ್ಬಿನ ಹಾಲು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !