ಬೆಂಗಳೂರು ಡಾನ್‌ ಬೇಕೋ, ಪ್ರಜ್ವಲ್‌ ಬೇಕೋ: ಸಚಿವ ರೇವಣ್ಣ

ಬುಧವಾರ, ಏಪ್ರಿಲ್ 24, 2019
23 °C
’ರಾಜ್ಯ ಸರ್ಕಾರಕ್ಕೆ ಬಿಜೆಪಿ ಕೊಟ್ಟ ಕೊಡುಗೆ ಏನು ಅಂಥ ಹೇಳಲಿ’

ಬೆಂಗಳೂರು ಡಾನ್‌ ಬೇಕೋ, ಪ್ರಜ್ವಲ್‌ ಬೇಕೋ: ಸಚಿವ ರೇವಣ್ಣ

Published:
Updated:
Prajavani

ಹಾಸನ: ‘ಬೆಂಗಳೂರು ಡಾನ್‌ ಬೇಕೋ, ಒಳ್ಳೆಯ ಕೆಲಸ ಮಾಡುವ ಯುವಕ ಪ್ರಜ್ವಲ್‌ ಬೇಕೋ ಎಂಬುದನ್ನು ಜಿಲ್ಲೆಯ ಜನರ ತೀರ್ಮಾನಕ್ಕೆ ಬಿಡುತ್ತೇನೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

‘ಬೆಂಗಳೂರಲ್ಲಿ 25 ವರ್ಷ ಡಾನ್‌ ರೀತಿ ಇದೆ ಅಂಥ ಬಿಜೆಪಿ ಅಭ್ಯರ್ಥಿ ಮಂಜು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮೂರು ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ವಸೂಲಿ ಮಾಡಿಕೊಂಡಿದ್ದರು. ಹಾಗಾಗಿ ಜನರೇ ತಮಗೆ ಸೂಕ್ತ ಎನಿಸಿದ ವ್ಯಕ್ತಿ ಆಯ್ಕೆ ಮಾಡಿಕೊಳ್ಳಲಿ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು ಎಂಬುದನ್ನು ಹೇಳುತ್ತಿಲ್ಲ. ಕರ್ನಾಟಕ ಏನು ಪಾಕಿಸ್ತಾನನಾ. ಬಿಜೆಪಿಗೆ ಯಾವ ನೈತಿಕತೆ ಇದೆ ಮತ ಕೇಳಲು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ದಲಿತರಿಗೆ ಮೀಸಲಾತಿ ಕಲ್ಪಿಸಿದರು. ಈದ್ಗಾ ವಿವಾದ ಬಗೆಹರಿಸಿದರು. ದಲಿತರು ಸೇರಿದಂತೆ ಹಿಂದುಳಿದ ಸಮುದಾಯಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿದರು ಎಂದರು.

ಈಶ್ವರಪ್ಪ ನೀರಾವರಿ ಸಚಿವರಾಗಿದ್ದರೂ ತುಮಕೂರಿಗೆ ನೀರು ಹರಿಸಲು ನಾಲೆ ವಿಸ್ತರಣೆಗೆ ಏಕೆ ಮಾಡಲಿಲ್ಲ. 25 ಟಿಎಂಸಿ ನೀರು ತುಮಕೂರಿಗೆ ನೀರು ಹರಿಸಲಾಗಿದೆ. ಸುಮ್ಮನೆ ದೇವೇಗೌಡ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರೈತರು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ್ದ ₹ 45 ಸಾವಿರ ಕೋಟಿ ಸಾಲಮನ್ನಾ ಮಾಡಿದರು. ಆದರೆ, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಏಕೆ ಮಾಡಲಿಲ್ಲ. ಇವರಿಗೆ ರೈತರು, ಬಡವರು ಬೇಕಿಲ್ಲ ಎಂದು ನುಡಿದರು.

‘ಬಿಜೆಪಿಗೆ ಯಾರು ಅಭ್ಯರ್ಥಿಗಳು ಇರಲಿಲ್ಲವೇ? ಐದು ವರ್ಷ ಪಕ್ಷಕ್ಕಾಗಿ ದುಡಿಯಲು ಹೇಳಿ ನಂತರ ಟಿಕೆಟ್‌ ನೀಡಬೇಕಿತ್ತು. ಮೂರು ವರ್ಷ ಸಚಿವರಾಗಿ ಮಜಾ ಮಾಡಿದವರಿಂದ ನೀತಿ ಪಾಠ ಕಲಿಯೇಕಿಲ್ಲ. 2.50 ಲಕ್ಷ ಮತಗಳಿಂದ ಸೋಲಿಸುತ್ತೇನೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಅವರೇ ಹೇಳಿದ್ದಾರೆ. ಇಂತಹ ವ್ಯಕ್ತಿಯಿಂದ ದೇವೇಗೌಡರು, ಕುಮಾರಸ್ವಾಮಿ ಕಲಿಯಬೇಕಾ’ ಎಂದು ಪ್ರಶ್ನಿಸಿದರು.
ಜಿಲ್ಲೆಯ ಜನರಿಗೆ ಸ್ವಾತಂತ್ರ್ಯ ಕೊಡಿಸಲು ಸ್ಪರ್ಧಿಸುತ್ತಿರುವುದಾಗಿ ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ. ಆದರೆ, ಮೂರು ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಏಕೆ ಕೊಡಿಸಲಿಲ್ಲ ಎಂದರು.

‌‘ಯಡಿಯೂರಪ್ಪ, ಈಶ್ವರಪ್ಪ ಹೇಳಿದವರಿಗೆ ಬಿಲ್ ಕೊಟ್ಟಿದ್ದೇನೆ. ಹಾಗಾದರೆ ಅವರು ಕಮಿಷನ್ ತೆಗೆದುಕೊಂಡಿರಬೇಕು. ಜೈಲಿಗೆ ಹೋಗಿ ಬಂದವರ ಪರ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಪರ್ಸೆಂಟೆಜ್ ತೆಗೆದುಕೊಳ್ಳುವವರು ಬಿಜೆಪಿಯವರು. ಐಟಿ ದಾಳಿ ನಡೆದಾಗ ನೋಟ್ ಎಣಿಸುವ ಮಷಿನ್‌ ಯಾರ ಮನೆಯಲ್ಲಿ ಸಿಕ್ಕಿತ್ತು. ಬಿಜೆಪಿ ನಾಯಕರ ಮನೆಯಲ್ಲಿ ‌ದುಡ್ಡು ಇಟ್ಟಿರುವ ಬಗ್ಗೆ ದೂರು ನೀಡಿದರು ದಾಳಿ ಮಾಡುತ್ತಿಲ್ಲ’ ಎಂದು ಕಿಡಿಕಾರಿದರು.

‘ದೇಶ ಉಳಿಯಬೇಕಾದರೆ ಬಿಜೆಪಿ ತೊಲಗಬೇಕು. ಇಲ್ಲವಾದಲ್ಲಿ ರಾಷ್ಟ್ರಕ್ಕೆ ಆಪತ್ತು ಕಾದಿದೆ. ನನ್ನ ವಿರುದ್ಧ ಅಪಪ್ರಚಾರ ಮಾಡಲು ಕರಪತ್ರ ಮಾಡಿಸಿ ಹಂಚುತ್ತಿದ್ದಾರೆ. ಮೂರು ವರ್ಷ ವಸೂಲಿ ಮಾಡಿ, ಈಗ ಸಿದ್ದರಾಮಯ್ಯ ನನ್ನ ನಾಯಕ ಎನ್ನುತ್ತಿರುವ ಬಿಜೆಪಿ ಅಭ್ಯರ್ಥಿ, ಬಿಜೆಪಿ ಬಿಟ್ಟು ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಲಿ’ ಎಂದು ಸಲಹೆ ನೀಡಿದರು.

ಜನ ಶಕ್ತಿ ನೀಡಿದರೆ ರಾಜಕೀಯ, ಇಲ್ಲವಾದರೆ ಎರಡು ಗುಂಡು ತಿಂದು ಪಡುವಲಹಿಪ್ಪೆಯಲ್ಲಿ ಮಲಗುತ್ತೇನೆ ಎಂದರು.

ಗೋಷ್ಠಿಯಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಗೌಡ, ಮುಖಂಡರಾದ ಸೋಮನಹಳ್ಳಿ ನಾಗರಾಜ್‌, ಸತ್ಯನಾರಾಯಣ, ಲಕ್ಷ್ಮೇಗೌಡ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !