ಗುರುವಾರ , ಸೆಪ್ಟೆಂಬರ್ 24, 2020
21 °C
ಕಲಾ ಭವನದಲ್ಲಿ ಐದು ದಿನ ನಡೆಯುವ ವಿಶೇಷ ಗ್ರಾಹಕ ಮೇಳಕ್ಕೆ ಚಾಲನೆ

ಹಾಸನ: ಮೊದಲ ದಿನ ₹ 18 ಕೋಟಿ ಸಾಲ ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೇಂದ್ರೀಯ ಹಣಕಾಸು ಸಚಿವಾಲಯ ನಿರ್ದೇಶನದ ಮೇರೆ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ವಿವಿಧ ಬ್ಯಾಂಕ್ ಗಳ ಸಹಯೋಗದಲ್ಲಿ ನಗರದ ಕಲಾಭವನದಲ್ಲಿ ಗುರುವಾರದಿಂದ ಆರಂಭಗೊಂಡಿರುವ ವಿಶೇಷ ಗ್ರಾಹಕ ಮೇಳಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಕೃಷಿ, ಸಣ್ಣ ಉದ್ದಿಮೆ, ಗೃಹ, ರೀಟೆಲ್, ವೈಯಕ್ತಿಕ, ವಾಹನ, ಶೈಕ್ಷಣಿಕ, ಮುದ್ರಾ, ಹೈನುಗಾರಿಕೆ, ಚಿನ್ನಾಭರಣ, ಸ್ವ–ಸಹಾಯ ಗುಂಪು ಮುಂತಾದ ಕ್ಷೇತ್ರಗಳಿಗೆ ಬ್ಯಾಂಕ್‌ಗಳಲ್ಲಿ ದೊರಯುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಹಾಗೂ ಸಾಲ ಮಂಜೂರು ಮಾಡಲು ಜಿಲ್ಲೆಯ ವಿವಿಧ ಬ್ಯಾಂಕ್‌ಗಳು ವಿಶೇಷ ಕೌಂಟರ್ ತೆರೆದಿದ್ದವು. ಅ.7ರ ವರೆಗೂ ಮೇಳ ನಡೆಯಲಿದೆ.

ಮೊದಲ ದಿನವೇ 600ಕ್ಕೂ ಅಧಿಕ ಮಂದಿಗೆ ಸ್ಥಳದಲ್ಲೇ ಸಾಲ ಮಂಜೂರಾತಿ ಪತ್ರ ನೀಡಲಾಗಿದ್ದು, ₹ 18 ಕೋಟಿಗೂ ಅಧಿಕ ಮೊತ್ತದ ಸಾಲ ಮಂಜೂರು ಮಾಡಿವೆ. ಇದರಲ್ಲಿ ಕೆನರಾ ಬ್ಯಾಂಕ್ ₹ 12 ಕೋಟಿ ಸಾಲ ಮಂಜೂರು ಮಾಡಿದೆ.

ನಗರ ಸೇರಿದಂತೆ ವಿವಿಧ ಹಳ್ಳಿಗಳಿಂದ ಉದ್ಯಮಿಗಳು, ನೌಕರರು, ಕೃಷಿಕರು, ಚಾಲಕರು ಮೇಳದಲ್ಲಿ ಭಾಗವಹಿಸಿ ಸಾಲ ಸೌಲಭ್ಯದ ಮಾಹಿತಿ ಪಡೆದರು, ಕೆಲವರು ದಾಖಲೆಗಳ ನೀಡಿ ಸ್ಥಳದಲ್ಲೇ ಸಾಲ ಮಂಜೂರು ಮಾಡಿಸಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ , ಬ್ಯಾಂಕುಗಳು ಸಕಾಲದಲ್ಲಿ ಜನಸಾಮಾನ್ಯರಿಗೆ ಸಾಲ ನೀಡುವ ಮೂಲಕ ಸ್ವ-ಉದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಾಲ, ಸೌಲಭ್ಯಗಳನ್ನು ಯುವ ಜನರು ಸದುಪಯೋಗ ಪಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಅದೇ ರೀತಿ ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ ವಹಿವಾಟಿಗೂ ಸಹಕರಿಸಬೇಕು ಎಂದು ತಿಳಿಸಿದರು.

ಸಾಲ, ಸೌಲಭ್ಯಗಳು, ಬ್ಯಾಂಕ್ ಮತ್ತು ಫಲಾನುಭವಿಗಳ ನಡುವಿನ ನಿರಂತರ ಪ್ರಕ್ರಿಯೆಯಾಗಿದ್ದು, ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಕಲ್ಪಿಸದೆ ನೇರವಾಗಿ ವಹಿವಾಟು ನಡೆಯುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕೆನರಾ ಬ್ಯಾಂಕ್ ಮಹಾಪ್ರಬಂಧಕ ಯೋಗೇಶ್ ಆಚಾರ್ಯ ಮಾತನಾಡಿ, ಗ್ರಾಹಕ ಮೇಳವನ್ನು ದೇಶಾದಾದ್ಯಂತ 2 ಹಂತದಲ್ಲಿ 400 ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದು, ಮೊದಲ ಹಂತದಲ್ಲಿ 250 ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಒಂದೊಂದು ರಾಷ್ರೀಕೃತ ಬ್ಯಾಂಕ್‌ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಶಂಕರನಾರಾಯಣ ಮಾತನಾಡಿ, ಮೇಳದಲ್ಲಿ ಭಾಗವಹಿಸಿರುವ ಬ್ಯಾಂಕ್‌ಗಳಲ್ಲಿ ದೊರೆಯುವ ಕೃಷಿ, ಸಣ್ಣ ಉದ್ದಿಮೆ, ಗೃಹ ಹಾಗೂ ವಾಹನ ಮತ್ತು ಇತರ ಸಾಲ, ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ನೀಡಿ ನಿಯಮಾನುಸಾರ ಸಾಲ ಮಂಜುರಾತಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನಬಾರ್ಡ್‍ನ ಸಹಾಯಕ ಮಹಾ ಪ್ರಬಂಧಕ ವಿ.ಜಿ. ಭಟ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಮಹಾಪ್ರಬಂಧಕ ಟಿ. ಜಗದೀಶ್, ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಬಸವರಾಜು, ವಿಭಾಗೀಯ ಪ್ರಬಂಧಕ ಎ.ಮಂಜುನಾಥ್, ವೆಂಕಟರಮಣ, ಬ್ಯಾಂಕ್ ಆಫ್ ಬರೋಡಾದ ಉಪ ಮಹಾ ಪ್ರಬಂಧಕ ಕೆ.ಆರ್.ಕಲಂಗಳ್, ಎಸ್ ಬಿಐ ವಿಭಾಗೀಯ ಮಹಾ ಪ್ರಬಂಧಕ ಸುಮಿಂತ್ರೇಂದ್ರ ರೆಡ್ಡಿ, ಕಾರ್ಪೋರೇಶನ್ ಬ್ಯಾಂಕ್‌ ಸಹಾಯಕ ಮಹಾ ಪ್ರಬಂಧಕ ಎಸ್.ವಿ.ದೇಶಪಾಂಡೆ, ಸಿಂಡಿಕೇಟ್ ಬ್ಯಾಂಕ್‌ನ ವಿಭಾಗೀಯ ಪ್ರಬಂಧಕ ಕೆ.ವಿ.ಅಶೋಕ್ ಕುಮಾರ್, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಶೇಖರ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾದ ಡಿಜಿಎಂ ರಾಜು ಎಸ್. ಕಡಗದಾಳ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.