ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ಪಡೆಯಲು ಮುಗಿಬಿದ್ದ ಜನರು

ನಗರದಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ
Last Updated 19 ಅಕ್ಟೋಬರ್ 2018, 13:53 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ವಿಜಯದಶಮಿ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಬನ್ನಿ ಮಂಟಪದಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ಬನ್ನಿ ಕಡಿದು ವಿಜಯದಶಮಿಯನ್ನು ಸಂಭ್ರಮಿಸಲಾಯಿತು.

ಸಂಪ್ರದಾಯ ಪ್ರಕಾರ ನಗರದ ಪ್ರಮುಖ ದೇವಾಲಯಗಳಿಂದ ಆಂಜನೇಯ, ಸಿದ್ಧೇಶ್ವರ, ಶನೇಶ್ವರ, ಮೈಲಾರಲಿಂಗೇಶ್ವರ, ಚನ್ನಕೇಶವೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಹಾಸನಾಂಬ ದೇವಾಲಯದ ಆವರಣಕ್ಕೆ ತಂದು, ಪೂಜೆ ಸಲ್ಲಿಸಿ, ನಂತರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ಸಾಲಗಾಮೆ ರಸ್ತೆಯ ಬನ್ನಿ ಮಂಟಪಕ್ಕೆ ತರಲಾಯಿತು.

ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಜನರು ಉತ್ಸವ ಮೂರ್ತಿಗಳಿಗೆ ಮಂಗಳಾರತಿ ಮಾಡಿ, ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು.

ಧಾರ್ಮಿಕ ಸಂಪ್ರದಾಯದ ಪ್ರಕಾರ, ಪಂಚ ದೇವರ ಉತ್ಸವ ಮೂರ್ತಿಗಳನ್ನು ಮಂಟಪಗಳಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಯಿತು.

ನಂತರ ತಳವಾರ ವಂಶಸ್ಥ ನರಸಿಂಹರಾಜ ಅರಸ್ ಅವರು ರಾಜವಂಶಸ್ಥರ ಕತ್ತಿಗೆ ಪೂಜೆ ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನದ ಪ್ರಕಾರ ಬನ್ನಿ ಪ್ರತೀಕವಾದ ಬಾಳೆ ಕಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಕತ್ತಿಯಿಂದ ಬನ್ನಿ ಕಡಿದರು. ನೆರೆದಿದ್ದ ನೂರಾರು ಜನರು ಬನ್ನಿ ಸಂಗ್ರಹಿಸಲು ಮುಗಿ ಬಿದ್ದರು. ನಂತರ ಎಲ್ಲರಿಗೂ ಪ್ರಸಾದ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT