ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಬಸವಣ್ಣ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌ ಅಭಿಮತ
Last Updated 26 ಏಪ್ರಿಲ್ 2020, 16:53 IST
ಅಕ್ಷರ ಗಾತ್ರ

ಹಾಸನ: ‘12ನೇ ಶತಮಾನದಲ್ಲಿಯೇ ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ಪಿಡುಗು ತೊಡೆದು ಹಾಕಲು ಬಸವಣ್ಣ ಶ್ರಮಿಸಿದರು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಏರ್ಪಡಿಸಿದ್ದ ಬಸವ ಜಯಂತಿ ಉದ್ಘಾಟಿಸಿ, ಮಾತನಾಡಿದರು.

ಬಸವಣ್ಣನವರು ತಮ್ಮ ಚಿಂತನೆ, ವಚನ ಹಾಗೂ ಸಾಹಿತ್ಯಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಅನೇಕ ಮೂಢನಂಬಿಕೆ ಹೋಗಲಾಡಿಸಿದರು. ಜಾತಿ ವ್ಯವಸ್ಥೆ, ಲಿಂಗ ತಾರತಮ್ಯದ ವಿರುದ್ಧ ಹೋರಾಡಿ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿ ಅದನ್ನು ಆಚರಣೆಗೆ ತಂದ ಕೀರ್ತಿ ದಾರ್ಶನಿಕರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಜಾತಿ ಪದ್ಧತಿ, ಮೂಢ ನಂಬಿಕೆಗಳ ವಿರುದ್ಧ ಹೋರಾಡುವ ಜೊತೆಗೆ ಅನುಭವ ಮಂಟಪ ಸ್ಥಾಪಿಸಿ ನೂರಾರು ಶಿವಶರಣರನ್ನು ರೂಪಿಸಿದರು, ಇದರಿಂದ ಹೊಸ ಸಾಮಾಜಿಕ ವ್ಯವಸ್ಥೆ ಆರಂಭವಾಯಿತು ಎಂದು ನುಡಿದರು.

ಪೊಲೀಸ್ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸ್ ಗೌಡ ಮಾತನಾಡಿ, ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿದ ಹಾಗೂ ಜಾತಿ ಪದ್ಧತಿ ಹೋಗಲಾಡಿಸಲು ಹೋರಾಡಿದ ಬಸವಣ್ಣನ ದಾರಿಯಲ್ಲಿ ನಡೆಯಬೇಕು ಎಂದರು.

ಬಸವಣ್ಣನ ವಚನ ಹೇಳಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ, ‘ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಹೋರಾಡಿ ಎಲ್ಲರೂ ಒಂದೇ ಎಂದು ಜಗತ್ತಿಗೆ ಸಾರಿದರು ಬಸವಣ್ಣ’ ಎಂದು ತಿಳಿಸಿದರು.

ಸಮಾಜದ ಪ್ರಮುಖರಾದ ಭುವನಾಕ್ಷ, ಪತ್ರಕರ್ತ ಉದಯ್‌ಕುಮಾರ್, ಬಸವ ಕೇಂದ್ರದ ಕಾರ್ಯದರ್ಶಿ ಸೋಮಶೇಖರ್ ಮಾತನಾಡಿ, ಬಸವಣ್ಣನ ಚಿಂತನೆಯನ್ನು ಎಲ್ಲರೂ ಅಳವಡಿಸಿಕೊಂಡರೆ ಸಮಾಜ ಉನ್ನತ ಹಾದಿಯಲ್ಲೂ ಸಾಗಲು ಸಾಧ್ಯ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ವಿಭಾಗಾಧಿಕಾರಿ ನವೀನ್ ಭಟ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಕುಂಬಾರ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT