ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಬಹಿರ್ದೆಸೆ ಮುಕ್ತ ಗ್ರಾಮಕ್ಕೆ ಶ್ರಮಿಸಿ

ಘನ ತ್ಯಾಜ್ಯ ನಿರ್ವಹಣೆ: 267 ಗ್ರಾ.ಪಂ ಪೈಕಿ ಶೇ. 80ರಷ್ಟು ಜಾಗದ ಸಮಸ್ಯೆ ಇತ್ಯರ್ಥ
Last Updated 6 ನವೆಂಬರ್ 2019, 13:56 IST
ಅಕ್ಷರ ಗಾತ್ರ

ಹಾಸನ: ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿ ಕಾಪಾಡುವ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆ ವತಿಯಿಂದ ಏರ್ಪಡಿಸಿದ್ದ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯ ಸುಸ್ಥಿರತೆ ಕುರಿತ ಕ್ರಿಯಾ ಯೋಜನೆ ರೂಪಿಸುವ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರ ಪ್ರಯತ್ನ ಮುಖ್ಯ. ಇದರ ಜೊತೆಗೆ ಪ್ರತಿ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ನಿಯೋಜಿತವಾಗಿ ವಿಲೇವಾರಿ ಮಾಡಬೇಕು. ಈ ಯೋಜನೆಯನ್ನು ಗ್ರಾಮ ವ್ಯಾಪ್ತಿಯಲ್ಲಿ ಅತಿ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಸ್ವಚ್ಛ ಭಾರತ್ ಮಿಷನ್ ಸಮಾಲೋಚಕ ಜಗದೀಶ್ ಮಾತನಾಡಿ, ಈ ಯೋಜನೆಯಡಿ ವೈಯಕ್ತಕಿ ಗೃಹ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸಾಮಾನ್ಯ ವರ್ಗಕ್ಕೆ ₹12 ಸಾವಿರ, ಪರಿಶಿಷ್ಟ ಜಾತಿ, ವರ್ಗಕ್ಕೆ ₹ 15 ಸಾವಿರ ಪ್ರೊತ್ಸಾಹ ಧನ ಪಾವತಿಸಲಾಗುತ್ತಿದೆ. ಸಮುದಾಯ ಶೌಚಾಲಯ ನಿರ್ಮಾಣಕ್ಕೆ ₹ 2 ಲಕ್ಷ, ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ನಿರ್ವಹಣೆಗೆ ಘಟಕ ವೆಚ್ಚ ₹ 2 ಲಕ್ಷಗಳಾಗಿದೆ ಎಂದು ವಿವರಿಸಿದರು.

ಸ್ವ ಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಎಸ್ ಡಿ ಎಂಸಿ ಸದಸ್ಯರು, ಸಾರ್ವಜನಿಕರು, ಫಲಾನುಭವಿಗಳು, ಶಾಲಾ ಮಕ್ಕಳು ಮತ್ತು ಅಂಗನವಾಡಿ ಮಕ್ಕಳಿಗೆ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ಹಾಗೂ ಪಂಚಾಯಿತಿ ಅಭಿವೃದ್ಥಿ ಅಧಿಕಾರಿ, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನಿರಂತರ ತರಬೇತಿ ಮತ್ತು ಕಾರ್ಯಾಗಾರ ನಡೆಸಲಾಗಿದೆ. ಜಿಲ್ಲೆಯ 267 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಐಇಸಿ ಚಟುವಟಿಕೆ ಮುಂದುವರೆಸಿದೆ ಎಂದು ನುಡಿದರು.

ಘನ ತ್ಯಾಜ್ಯ ನಿರ್ವಹಣೆ ಕುರಿತು ಜಿಲ್ಲೆಯ 267 ಗ್ರಾಮ ಪಂಚಾಯಿತಿಗಳ ಪೈಕಿ ಶೇಕಡಾ 80 ಪಂಚಾಯಿತಿಗಳಲ್ಲಿ ಜಾಗದ ಸಮಸ್ಯೆ ಬಗೆಹರಿದಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸಿ, ಹಸಿ ತ್ಯಾಜ್ಯವನ್ನು ಅವರ ಮನೆಗಳ ವ್ಯಾಪ್ತಿಯಲ್ಲಿ ಬರುವ ಗೊಬ್ಬರದ ಗುಂಡಿಯಲ್ಲಿ ವಿಲೇವಾರಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಒಣ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯಿಂದ ಅಧಿಕೃತವಾಗಿ ನೇಮಿಸಿರುವವರಿಗೆ ಹಸ್ತಾಂತರಿಸಲು ತಿಳಿಸಲಾಗಿದೆ. 267 ಗ್ರಾಮ ಪಂಚಾಯಿತಿ ಪೈಕಿ ಶೇಕಡಾ 50 ರಷ್ಟು ಪಂಚಾಯಿತಿಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಮುಖ್ಯ ಯೋಜನಾಧಿಕಾರಿ ಎಚ್.ವಿ. ನಾಗರಾಜು, ಸ್ವಚ್ಛ ಭಾರತ್ ಮಿಷನ್‌ ಸಮಾಲೋಚಕ ದಿನೇಶ್, ಹಾಗೂ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT