ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಮೇಲ್ಸೇತುವೆ ದುರಸ್ತಿ ಶುರು

ಹಂಗರಹಳ್ಳಿ ಸೇತುವೆ ತಿಂಗಳೊಳಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ
Last Updated 11 ಏಪ್ರಿಲ್ 2022, 5:36 IST
ಅಕ್ಷರ ಗಾತ್ರ

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಸಮೀಪದ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿ ಆರಂಭವಾಗಿದ್ದು, ಈ ಮಾರ್ಗದ ವಾಹನಗಳ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಮಾರ್ಗದಲ್ಲಿ ಸಂಚರಿ ಸುವ ಎಲ್ಲ ವಾಹನಗಳು ಹಂಗರಹಳ್ಳಿ, ಹನುಮನಹಳ್ಳಿ, ಪಡುವಲಹಿಪ್ಪೆ, ಮಾರಗೌಡನಹಳ್ಳಿ, ನಾಗಲಾಪುರ ಗೇಟ್ ಮೂಲಕ ಹಾದು ಹೋಗಿ ಹೊಳೆನರಸೀಪುರ ತಲುಪಲು ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಗ್ಗೆ ರಸ್ತೆಯ ಎರಡೂ ಬದಿ ಸೂಚನಾ ಫಲಕ ಅಳವಡಿಸಲಾಗಿದೆ.

ಹಾಸನ - ಹೊಳೆನರಸೀಪುರ ನಡುವಿನ ಹಂಗರಹಳ್ಳಿ ಸಮೀಪ ಮೂರು ವರ್ಷಗಳ ಹಿಂದೆ ನಿರ್ಮಿಸಿದ್ದ ಮೇಲ್ಸೇತುವೆ ಕಾಮಗಾರಿ ಕಳಪೆಯಾಗಿದೆ ಎಂದು ದೂರುಗಳು ಕೇಳಿ ಬಂದಿದ್ದವು. ಹಲವು ಪ್ರತಿಭಟನೆಗಳೂ ನಡೆದಿದ್ದವು.

ಕಳಪೆ ಕಬ್ಬಿಣ, ಸಿಮೆಂಟ್ ಬಳಸಲಾಗಿದ್ದರಿಂದ ಅಪಾಯಕ್ಕೆ ಆಹ್ವಾನ ನೀಡಲಿದೆ ಎಂದು ದೂರಲಾಗಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ ದಿನ ಕಳೆದಂತೆ ಮೇಲ್ಸೇತುವೆ ಶಿಥಿಲಾವಸ್ಥೆಗೆ ತಲುಪಿತ್ತು. ಆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರಯಾಸದಲ್ಲಿ ಮುಂದೆ ಸಾಗುವ ಸ್ಥಿತಿ ಇತ್ತು.

ಸಾರ್ವಜನಿಕರ ಮನವಿಗೆ ಸ್ಪಂದಿಸಿದ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಅವರು ರೈಲ್ವೆ ಸಚಿವರನ್ನು ಭೇಟಿ ಮಾಡಿ ಮೇಲ್ಸೇತುವೆ ಸ್ಥಿತಿಗತಿಗಳ ಬಗ್ಗೆ ವಿವರಿಸಿ, ಕೂಡಲೇ ದುರಸ್ತಿ ಮಾಡಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ರೈಲ್ವೆ ಇಲಾಖೆ ಅಧಿಕಾರಿಗಳ ತಂಡ ಈಚೆಗೆ ಸ್ಥಳ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಆರಂಭಿಸಲು ಗುತ್ತಿಗೆದಾರರಿಗೆ ಸೂಚಿಸಿತ್ತು.

ನೈಋತ್ಯ ರೈಲ್ವೆ ಮೈಸೂರು ವಿಭಾಗದ ಗುತ್ತಿಗೆ ಸಂಸ್ಥೆ ಇದೀಗ ದುರಸ್ತಿ ಕಾರ್ಯ ಕೈಗೊಂಡಿದ್ದು, ಮೂವತ್ತು ದಿನಗಳೊಳಗೆ ಸಂಚಾರಕ್ಕೆ ಮುಕ್ತಗೊಳಿಸಲು ಉದ್ದೇಶಿಸಿದೆ.

‘ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ಹಾಗೂ ಶಾಸಕ ಎಚ್.ಡಿ. ರೇವಣ್ಣ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದ್ದೇವೆ. ರಸ್ತೆಯ ಮೇಲ್ಪದರವನ್ನು ಸಂಪೂರ್ಣ ತೆಗೆದು ಹೊಸದಾಗಿ ನಿರ್ಮಿಸಲಾಗುವುದು. 20 ದಿನಗಳೊಳಗೆ ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ತಿಂಗಳೊಳಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳ್ಳಲಿದೆ’ ಎಂದು ಮೈಸೂರು ನೈಋತ್ವ ರೈಲ್ವೆ ಉಪವಿಭಾಗದ ಉಪ ಮುಖ್ಯ ಎಂಜಿನಿಯರ್ ಪ್ರಭಾಕರನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT