ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿಗಾಗಿ ನಿರಂತರ ಧರಣಿ ಆರಂಭ

ಗುಂಡಿಮಯ ಹೆದ್ದಾರಿ: ವಾಹನ ಸಂಚಾರ ದುಸ್ತರ– ಆಕ್ರೋಶ
Last Updated 23 ಅಕ್ಟೋಬರ್ 2019, 12:06 IST
ಅಕ್ಷರ ಗಾತ್ರ

ಸಕಲೇಶಪುರ: ಸಂಪೂರ್ಣ ಗುಂಡಿಮಯವಾಗಿ ಸಂಚಾರಕ್ಕೆ ಸಂಚಕಾರ ಉಂಟಾಗಿರುವ ಹಾಸನ– ಹೆಗ್ಗದ್ದೆ ನಡುವಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಕೂಡಲೇ ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಬುಧವಾರದಿಂದ ಬಾಳ್ಳುಪೇಟೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ, ಕ.ರ.ವೇ ಸ್ವಾಭಿಮಾನಿ ಸೇನೆ, ಜನಸ್ಪಂದನ ವೇದಿಕೆ, ರೈತ ಸಂಘ, ದಲಿತ ಸಂಘಟನೆಗಳು, ರಾಜ್ಯ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘ, ವಿವಿಧ ರಾಜಕೀಯ ಪಕ್ಷಗಳು, ಬಾಳ್ಳುಪೇಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆ 11ಕ್ಕೆ ಕೆಲ ನಿಮಿಷಗಳ ಕಾಲ ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ರಸ್ತೆಬದಿ ಶಾಮಿಯಾನದಲ್ಲಿ ನಿರಂತರ ಧರಣಿ ಆರಂಭಿಸಿದರು.

‘ಹಾಸನದಿಂದ ಹೆಗ್ಗದ್ದೆವರೆಗೆ 45 ಕಿ.ಮೀ. ಬರೀ ಹೊಂಡಗಳೇ ಇದ್ದು ಹೆದ್ದಾರಿ ಯಾವುದು ಎಂದು ಹುಡುಕುವಂತಾಗಿದೆ. ವಾಹನ ಚಲಾಯಿಸುವುದು ಹರಸಾಹಸ. ಈ ರಸ್ತೆಯಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಹಲವರು ಜನ ಜೀವ ಕಳೆದುಕೊಂಡಿದ್ದಾರೆ ಮತ್ತು ಶಾಶ್ವತ ಅಂಗವಿಕಲರಾಗಿದ್ದಾರೆ. ನಿತ್ಯ ಹತ್ತಾರು ವಾಹನಗಳು ಮಾರ್ಗ ಮಧ್ಯೆ ಕೆಟ್ಟು ನಿಂತು, ದೋಣಿಗಾಲ್‌ನಿಂದ ಹೆಗ್ಗದ್ದೆವರೆಗೆ ನಿತ್ಯ ಗಂಟೆಗಟ್ಟಲೆ ವಾಹನ ಸಂಚಾರ ಬಂದ್‌ ಆಗಿ ಪ್ರಯಾಣಿಕರು ಪರದಾಡುವಂತಾಗಿದೆ’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಯಡೇಹಳ್ಳಿ ಆರ್‌. ಮಂಜುನಾಥ್‌ ಸಮಸ್ಯೆ ಬಿಚ್ಚಿಟ್ಟರು. ಅಲ್ಲದೇ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಆರಂಭ ಮಾಡುವವರೆಗೆ ಧರಣಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಬೆಳಗೂಡು ಹೋಬಳಿ ಬೆಳೆಗಾರರ ಅಧ್ಯಕ್ಷ ಬಿ.ಎನ್.ಬಸವಣ್ಣ, ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್, ತಾ.ಪಂ. ಉಪಾಧ್ಯಕ್ಷ ಎಚ್‌.ಎಚ್‌. ಉದಯ್‌, ಜನಸ್ಪಂದನ ವೇದಿಕೆ ಅಧ್ಯಕ್ಷ ಅರುಣ್‌ ರಕ್ಷಿದಿ, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಉಪಾಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ, ಬಾಳ್ಳು ಮಲ್ಲಿಕಾರ್ಜುನ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾನುಬಾಳು ಭಾಸ್ಕರ್, ಕರವೇ ಸ್ವಾಭಿಮಾನಿ ಸೇನೆ ಅಧ್ಯಕ್ಷ ಸಾಗರ್‌ ಜಾನೇಕೆರೆ, ನೇತ್ರಾ, ಕರ್ನಾಟಕ ರಕ್ಷಣಾ ವೇದಿಕೆ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT