ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭ: ಮಕ್ಕಳ ಸಂಭ್ರಮ

ಮೊದಲ ದಿನ ಶೇ 80 ಹಾಜರಿ, ಹೂವು, ಪೆನ್ನು ನೀಡಿ ಸ್ವಾಗತ
Last Updated 30 ಆಗಸ್ಟ್ 2021, 14:22 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗ್ಗಿದ ಹಿನ್ನೆಲೆಯಲ್ಲಿ 9 ಮತ್ತು 10ನೇ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು, ಸಿಹಿ ವಿತರಿಸಿ, ಹೂವು ಕೊಟ್ಟು ಮಕ್ಕಳನ್ನು ಸ್ವಾಗತಿಸಲಾಯಿತು.

ಜಿಲ್ಲೆಯಲ್ಲಿ 269 ಖಾಸಗಿ ಹಾಗೂ 241 ಸರ್ಕಾರಿ ಸೇರಿ 510 ಪ್ರೌಢಶಾಲೆಗಳಿವೆ. ಶಿಕ್ಷಣ ಇಲಾಖೆ ಮಾಹಿತಿ
ಪ್ರಕಾರ ಪ್ರಸಕ್ತ ವರ್ಷ ಒಂಬತ್ತನೇ ತರಗತಿಗೆ 22,253 ಹಾಗೂ 10ನೇ ತರಗತಿಗೆ 22,594 ವಿದ್ಯಾರ್ಥಿಗಳು
ದಾಖಲಾಗಿದ್ದಾರೆ.

ನಾಲ್ಕು ತಿಂಗಳ ಬಳಿಕ ಮಕ್ಕಳು ಧೈರ್ಯದಿಂದ ಶಾಲೆಗೆ ಬಂದು, ಕುಳಿತು ಪಾಠ ಕೇಳಿ ಸಂಭ್ರಮಿಸಿದರು. ಹಲವು ಶಾಲೆಗಳಲ್ಲಿ ಪ್ರವೇಶ ದ್ವಾರದಲ್ಲಿ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು.

ಭೌತಿಕ ತರಗತಿಗಳಿಗೆ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 9 ಮತ್ತು 10ನೇ ತರಗತಿಗಳ ಶೇಕಡಾ 80ರಷ್ಟು ವಿದ್ಯಾರ್ಥಿಗಳು ಮೊದಲ ದಿನ ತರಗತಿಗಳಿಗೆ ಹಾಜರಾಗಿ ಪಾಠಕೇಳಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳಿಗೆ ಬಂದಿದ್ದಾರೆ. ‌

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್‌.ಪ್ರಕಾಶ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಧೈರ್ಯದಿಂದ ಶಾಲೆಗೆ ಬರುವಂತೆ ಹೇಳಿದರು.

ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆದವು. ಜಿಲ್ಲೆಯಲ್ಲಿ ಪ್ರಸ್ತುತ ಕೊರೊನಾ ಪಾಸಿಟಿವಿಟಿ ದರ ಶೇ1.58 ರಷ್ಟಿದೆ. ಕೊರೊನಾ ಸೋಂಕು ತಡೆಯುವುದಕ್ಕಾಗಿ ಸರ್ಕಾರ ರೂಪಿಸಿರುವ ಎಲ್ಲ ಮಾನದಂಡಗಳನ್ನು ಪಾಲಿಸಲಾಗಿದೆ. ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಒಂದು ಡೆಸ್ಕ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗೆ ಶಾಲೆಯಲ್ಲಿ ಬಿಸಿನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.

ಶಾಲೆ ಆರಂಭಕ್ಕೂ ಮುನ್ನವೇ ಎಲ್ಲ ಕಡೆಗಳಲ್ಲಿ ಸ್ಯಾನಿಟೈಸ್‌ ಮಾಡಲಾಗಿತ್ತು. ಮಾಸ್ಕ್ ಧರಿಸುವಂತೆ, ವೈಯಕ್ತಿಕ ಅಂತರ ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಯಿತು. ಥರ್ಮಲ್ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ನೀಡಿ ವಿದ್ಯಾರ್ಥಿಗಳನ್ನು ತರಗತಿ ಒಳಕ್ಕೆ ಕಳುಹಿಸಲಾಯಿತು.

ಪೋಷಕರ ಸಮ್ಮತಿ ಪತ್ರದೊಂದಿಗೆ ಹಾಜರಾಗಲು ಮಕ್ಕಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಆದರೆ,ಮೊದಲ ದಿನ ಬೆರಳಣಿಕೆ ಮಕ್ಕಳು ಮಾತ್ರ ಸಮ್ಮತಿ ಪತ್ರದೊಂದಿಗೆ ಹಾಜರಾಗಿದ್ದರು. ಹಾಗಾಗಿ ಎಲ್ಲರಿಗೂ ತರಗತಿಯಲ್ಲಿ ಕುಳಿತು ಪಾಠ ಕೇಳಲು ಅವಕಾಶ ನೀಡಲಾಯಿತು.

ನಗರದ ಎಸ್. ಆರ್. ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪೆನ್ನು ಹಾಗೂ ಹೂವುನೀಡಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಠ, ಪ್ರವಚನಗಳಲ್ಲಿ ತೊಡಗಿಸಿಕೊಂಡರು. ಕೋವಿಡ್‌ 19 ಜಾಗೃತಿ ಕುರಿತ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.

‘ಮೊದಲ ದಿನವಾದ ಕಾರಣ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಮಾಡಲಿಲ್ಲ. ಕೆಲವರು ಒಪ್ಪಿಗೆ ಪತ್ರ
ತಂದಿದ್ದರು.ಎರಡು, ಮೂರು ದಿನಗಳಲ್ಲಿ ಸಮ್ಮತಿ ಪತ್ರ ತಂದು ಕೊಡುವಂತೆ ಸೂಚಿಸಲಾಗಿದೆ. ಶೇಕಡಾ 80ರಷ್ಟು ಮಕ್ಕಳು ಹಾಜರಾಗಿದ್ದರು. ಕೋವಿಡ್‌ ಮಾರ್ಗಸೂಚಿ ಪ್ರಕಾರ ತರಗತಿ ನಡೆಸಲಾಗುತ್ತಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಉಪ ನಿರ್ದೇಶಕ ಕೆ.ಎಸ್.ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT