ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ; ಭಾರಿ ವಾಹನಗಳ ಸಂಚಾರ ಬಂದ್‌

ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಭೇಟಿ, ದುರಸ್ತಿ ಆರಂಭ
Last Updated 23 ಜುಲೈ 2021, 6:38 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ದೋಣಿಗಲ್‌ನಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ ಉಂಟಾಗಿ ರಾಜಧಾನಿ ಹಾಗೂ ಕರಾವಳಿ ನಡುವಿನ ಸಂಚಾರ ಬಂದ್‌ ಆಗಿದ್ದು, ಈ ಮಾರ್ಗದ ಪ್ರಯಾಣಿಕರು, ಸರಕು ಸಾಗಣೆ ಲಾರಿಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.

ಬುಧವಾರ ರಾತ್ರಿಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಹಲವೆಡೆ ಭೂಕುಸಿತ, ಮನೆಗಳ ಗೋಡೆ ಕುಸಿದಿದೆ.ನೂರಾರು ಮರಗಳು ಧರೆಗುರುಳಿವೆ. ಮಳೆ ನೀರು ರಸ್ತೆಯಲ್ಲಿ ಹಳ್ಳದಂತೆ ಹರಿಯುತ್ತಿದ್ದು, ಸಂಚಾರಕ್ಕೂ ಅಡ್ಡಿಯಾಗಿದೆ. ಮರಗಳು ವಿದ್ಯುತ್‌ ತಂತಿ ಮೇಲೆ ಬಿದ್ದು, ಕಂಬಗಳು ಮುರಿದು ಬಿದ್ದಿವೆ. ಹಲವು ಗ್ರಾಮಗಳು ವಿದ್ಯುತ್‌ ಸಂಪರ್ಕ ಕಡಿತಗೊಂಡು ಭಾರಿ ಸಮಸ್ಯೆ ಉಂಟಾಗಿದೆ.

ರಾಷ್ಟ್ರೀಯ ಹೆದ್ದಾರಿ ದೋಣಿಗಾಲ್‌ ಬಳಿ ಸುಮಾರು 10 ಅಡಿ ಅಗಲ 50 ಅಡಿ ಉದ್ದ ಭೂ ಕುಸಿತ ಉಂಟಾಗಿದೆ. ರಸ್ತೆ ಇನ್ನೂ ಕುಸಿಯುತ್ತಲೇ ಇರುವುದರಿಂದ ಮಂಗಳೂರಿಗೆ ತೆರಳುವ ಭಾರಿ ವಾಹ ನಗಳನ್ನು ತಾತ್ಕಾಲಿಕವಾಗಿ ಹಾನುಬಾಳು, ಮೂಡಿಗೆರೆ, ಚಾರ್ಮಡಿಘಾಟ್‌ ಹಾಗೂ ಮಡಿಕೇರಿ–ಪುತ್ತೂರು ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಪ್ರತೀಕ್‌ ಬಯಾಲ್‌, ತಹಶೀಲ್ದಾರ್‌ ಎಚ್.ಬಿ. ಜೈಕುಮಾರ್, ಡಿವೈಎಸ್‌ಪಿ ಬಿ.ಆರ್‌. ಗೋಪಿ, ಇನ್‌ಸ್ಪೆಕ್ಟರ್ ಗಿರೀಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ರಸ್ತೆ ಅರ್ಧಭಾಗ ಕುಸಿದಿದ್ದು, ವಾಹನಗಳು ಸಂಚರಿಸಿದರೆ ಸಂಪೂರ್ಣ ಕುಸಿದು ವಾಹನಗಳು 200 ಅಡಿ ಆಳದ ಪ್ರಪಾತಕ್ಕೆಬೀಳುವ ಸಾಧ್ಯತೆ ಇದೆ. ಹಾಗಾಗಿ ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವ ನಿರ್ಧಾರಕ್ಕೆ ಬರಲಾಗಿದೆ’ ಎಂದುಪ್ರತೀಕ್‌ ಬಯಾಲ್‌ತಿಳಿಸಿದರು.

ನಿಗದಿತ ಅವಧಿಯಲ್ಲಿ ಹಾಸನ– ಬಿ.ಸಿ.ರಸ್ತೆ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳನ್ನು ಎಸಿ ತರಾಟೆಗೆ ತೆಗೆದುಕೊಂಡರು.

‘ಹಾಸನ– ಬಿ.ಸಿ. ರೋಡ್‌ ನಡುವಿನ ಚತುಷ್ಪಥ ಕಾಮಗಾರಿ 2019ರ ಮಾರ್ಚ್‌ಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತ ಆಗಬೇಕಿತ್ತು. ಅವಧಿ ಮುಗಿದು ಎರಡು ವರ್ಷಗಳಾದರೂ ಕೆಲಸ ಪೂರ್ಣಗೊಂಡಿಲ್ಲ. ರಸ್ತೆಯ ಗುಂಡಿ ಮುಚ್ಚಿಲ್ಲ. ಚರಂಡಿ ವ್ಯವಸ್ಥೆಯನ್ನೇ ಮಾಡದೆ ಮಳೆ ನೀರು ರಸ್ತೆಯಲ್ಲಿಯೇ ಸರಾಗವಾಗಿ ಹರಿಯುತ್ತಿದೆ. ಭೂ ಕುಸಿತ ಉಂಟಾಗುವ ರೀತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಮಾಡಲಾಗಿದೆ. ಭೂ ಕುಸಿತ, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಲು ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಹಾಗೂ ಎನ್‌ಎಚ್‌ಎಐ ಇಲಾಖೆ ಎಂಜಿನಿಯರ್‌ಗಳೇ ನೇರ ಹೊಣೆ’ ಎಂದು ಎ.ಸಿ ಎಚ್ಚರಿಸಿದರು

‘ಮಳೆಗಾಲದಲ್ಲಿ ಭೂ ಕುಸಿತದ ಮುನ್ಸೂಚನೆ ಇದ್ದರೂರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಸರಾಗವಾಗಿ ಹರಿಯುತ್ತಿರು ವುದರಿಂದಭೂ ಕುಸಿತ ಉಂಟಾಗಲು ಕಾರಣವಾಗಿದೆ’ಎಂದು ಸಾರ್ವಜನಿಕರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT