7
ಹೇಮಾವತಿ, ಯಗಚಿ ನಾಲೆ ನಿರ್ಮಾಣಕ್ಕೆ ಜಮೀನು

ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹ

Published:
Updated:
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಭೂಮಿ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹಾಸನ : ಹೇಮಾವತಿ ಹಾಗೂ ಯಗಚಿ ಅಚ್ಚುಕಟ್ಟು ಪ್ರದೇಶದ ನಾಲೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

‘ಹೇಮಾವತಿ ಹಾಗೂ ಯಗಚಿ ನಾಲೆಗೆ ಜಮೀನು ಕಳೆದುಕೊಂಡ ಸಂತ್ರಸ್ತರು ಹಲವು ವರ್ಷಗಳಿಂದಲೂ ಕಾನೂನು ಪ್ರಕಾರ ಕೋರಿಕೆ ಸಲ್ಲಿಸುತ್ತಿದ್ದರೂ ಪರಿಹಾರ ನೀಡಿಲ್ಲ. ಇದರಿಂದಾಗಿ ರೈತರು ಕುಟುಂಬ ನಿರ್ವಹಣೆ ಮತ್ತು ಮತ್ತಿತರ ಸಂಕಷ್ಟಗಳಿಗೆ ಗುರಿಯಾಗಿದ್ದಾರೆ. ಆದರೆ, ವಿಶೇಷ ಭೂಸ್ವಾಧೀನಾಧಿಕಾರಿ ಬಿ.ಎ. ಜಗದೀಶ್ ಪರಿಹಾರ ದೊರಕಿಸಿ ಕೊಡದೆ ರೈತರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಪರಿಹಾರ ವಿಚಾರವಾಗಿ ಭೂಸ್ವಾಧೀನಾಧಿಕಾರಿ ಕಚೇರಿಗೆ ಹೋದರೆ ರೈತರಿಗೆ ಗೌರವ ನೀಡದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅವರ ವರ್ತನೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಅವರ ಬಳಿ ಅಹವಾಲು ತೋಡಿಕೊಂಡಾಗ ತಕ್ಷಣ ಪರಿಹಾರದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಆದರೂ ಗಮನ ಹರಿಸದೆ ರೈತ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ನ್ಯಾಯಾಲಯದ ಆದೇಶದ ಪ್ರಕಾರ ನೀರಾವರಿ ನಿಗಮಕ್ಕೆ ಪ್ರಸ್ತಾವ ಸಲ್ಲಿಸಿ ಸಕಾಲಕ್ಕೆ ಪರಿಹಾರ ದೊರಕಿಸಿಕೊಡುವ ಜವಾಬ್ದಾರಿ ನಿರ್ವಹಿಸಿಲ್ಲ. ರೈತರಿಗೆ ಪರಿಹಾರ ಸಿಗದ ರೀತಿಯಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಹಠಮಾರಿ ಧೋರಣೆಯನ್ನು ಜಗದೀಶ್ ತಾಳಿದ್ದಾರೆ. ಭೂ ಪರಿಹಾರ ಮಂಜೂರಾತಿ ಹಾಗೂ ಪರಿಹಾರ ನೀಡಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಬೇಕು. ಭೂ ಮಂಜೂರಾತಿ ಅಕ್ರಮದಲ್ಲಿ ಭಾಗಿಯಾಗಿ ಸಂತ್ರಸ್ತರಿಂದ ಲಕ್ಷಾಂತರ ರೂಪಾಯಿ ವಸೂಲು ಮಾಡುತ್ತಿರುವ ಅಧಿಕಾರಿಗಳು ಹಾಗೂ ಜಮೀನು ಮಂಜೂರಾತಿಯಲ್ಲಿ ತೊಡಗಿಕೊಂಡಿರುವ ಹತ್ತಕ್ಕೂ ಹೆಚ್ಚು ಮಂದಿ ದಲ್ಲಾಳಿಗಳು, ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕೂಡಲೇ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಅಧ್ಯಕ್ಷ ಮಾಯಿಗೌಡ, ಮುಖಂಡರಾದ ಬಾಬು, ಮಂಜುನಾಥ್, ನಿಂಗೇಗೌಡ, ಧರ್ಮಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !