ಬೀದಿಗೆ ಬಿದ್ದ ಬೀಡಿ ಕಾರ್ಮಿಕರು

ಶುಕ್ರವಾರ, ಜೂಲೈ 19, 2019
24 °C
‘ಐಎಂಎ ಸಮೂಹ’ ಕಂಪನಿಯಲ್ಲಿ ಕೋಟ್ಯಂತರ ರೂಪಾಯಿ ಹಣ ಹೂಡಿಕೆ

ಬೀದಿಗೆ ಬಿದ್ದ ಬೀಡಿ ಕಾರ್ಮಿಕರು

Published:
Updated:

ಹೊಳೆನರಸೀಪುರ: ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿರುವ ಐ ಮಾನಿಟರಿ ಅಡ್ವೈಸರಿ (ಎಂಎಎ) ಕಂಪನಿಯ ಅಧಿಕ ಬಡ್ಡಿ ಆಮಿಷಕ್ಕೆ ಹಣ ಹೂಡಿಕೆ ಮಾಡಿದ ಹಲವರು ಬೀದಿ ಬಿದ್ದಿದ್ದಾರೆ.

ತಾಲ್ಲೂಕಿನ ಬಡ ಬೀಡಿ ಕಾರ್ಮಿಕರು, ಹಪ್ಪಳ ತಯಾರಕರು, ಆಟೋಚಾಲಕರು, ಗುಜರಿ ಅಂಗಡಿ ನಡೆಸುವವರು, ತಳ್ಳುಗಾಡಿಯಲ್ಲಿ ಹಣ್ಣು ಮಾರುವವರು ಸಣ್ಣಪುಟ್ಟ ಅಂಗಡಿಗಳ ಮಾಲೀಕರು ಸೇರಿದಂತೆ ಪಟ್ಟಣದ ಬಸಬನಗುಡಿ ಬೀದಿ, ಬಡಾ ಮೊಹಲ್ಲಾ, ರಿವರ್‌ ಬ್ಯಾಂಕ್‌ ರಸ್ತೆಯ ನೂರಾರು ಜನರು ತಮ್ಮ ಶಕ್ತಿ ಅನುಸಾರ ಕಂಪನಿಯಲ್ಲಿ ಹಣ ತೊಡಗಿಸಿದ್ದಾರೆ. ಈ ಮೊತ್ತ ಮೂರು ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಪಟ್ಟಣದ ಹಾಜಿರಾ ₹ 2.5 ಲಕ್ಷ, ಮುಸವೀರ್‌ ಪಾಷಾ ₹ 2.5 ಲಕ್ಷ, ಶಾಖಿರಾ ಬಾನು ₹ 2 ಲಕ್ಷ, ನಜೀರ್‌ ₹ 4 ಲಕ್ಷ, ಸಬೀಹಾ ₹ 4.5 ಲಕ್ಷ, ನಫೀಜಾ ₹ 1.5 ಲಕ್ಷ, ಖಮರ್‌ ಜಹಾ ₹ 13 ಲಕ್ಷ, ನಸೀರ್‌, ತೌಸಿಕ್‌, ಫಾತಿಮಾ ಹಾಗೂ ಕುಟುಂಬದ ಇತರೆ ಸದಸ್ಯರಿಂದ ₹ 75 ಲಕ್ಷ, ರಹಿನಾ ಕುಟುಂಬವರಿಂದ ₹ 70 ಲಕ್ಷ, ಸಹೀದ್‌ ₹ 4 ಲಕ್ಷ, ಅಬ್ದುಲ್‌ ರಬ್‌ ₹ 10 ಲಕ್ಷ, ನೂರುಲ್ಲಾ ₹ 12 ಲಕ್ಷ, ತನ್ನು ₹ 2.5 ಲಕ್ಷ, ಸೇರಿದಂತೆ 70 ಕ್ಕೂ ಹೆಚ್ಚು ಜನರು ಹಣ ತೊಡಗಿಸಿ, ಈಗ ಸಂಕಷ್ಟದಲ್ಲಿದ್ದಾರೆ.

ಈ ಎಲ್ಲರೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಹಣ ಹೂಡಿಕೆ ಮಾಡಿರುವ ವಿವರ ಲಗತ್ತಿಸಿದ್ದಾರೆ.

ಐ.ಎಂ.ಎ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಂಗಾಲಾಗಿದ್ದ ಕೆಲವರಿಗೆ ಸಾಂತ್ವನ ಹೇಳಿದ ಪುರಸಭೆ ಮಾಜಿ ಸದಸ್ಯ ಮುಜಾಹಿದ್‌, ಬೆಂಗಳೂರಿನ ಕಮರ್ಷಿಯಲ್ ಸ್ಷ್ಟ್ರೀಟ್‌ ಪೊಲೀಸರಿಗೆ ದೂರು ಕೊಡಿಸಿದ್ದಾರೆ.

‘ನಮ್ಮೂರಿನ ಮಹಿಳೆ ಒಬ್ಬರಿಗೆ ಪತಿ ಸಾವಿನ ನಂತರ ₹ 4.5 ಲಕ್ಷ ವಿಮೆ ಹಣ ಬಂದಿತ್ತು. ಈ ಹಣವನ್ನು ಕಂಪನಿಯಲ್ಲಿ ತೊಡಗಿಸಿ ಹಣಕಳೆದು ಕೊಂಡಿದ್ದಾರೆ. ಬೆಳಗ್ಗೆಯಿಂದ ಬೀಡಿ ಕಟ್ಟಿ, ಹಪ್ಪಳ ಮಾಡಿ ಮಾರಾಟ ಮಾಡಿ ದುಡಿದ ಹಣವನ್ನು ಕಂಪನಿಯಲ್ಲಿ ತೊಡಗಿಸಿ ಕಂಗಾಲಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂಸ್ಥೆ ಮಾಲೀಕ ಮಹಮದ್‌ ಮನ್ಸೂರ್ ಖಾನ್‌ ಮೋಸ ಮಾಡುವುದಿಲ್ಲ ಎಂಬ ನಂಬಿಕೆಯಿಂದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಕಂಪನಿಗೆ ಹಾಕಿದ್ದೆ. ಮಕ್ಕಳ ಭವಿಷ್ಯ ನೆನಪಿಸಿಕೊಂಡರೆ ಆತಂಕ ಆಗುತ್ತಿದೆ’ ಎಂದು ಹೆಸರು ಹೇಳಲಿಚ್ಚಿಸದ ಹೂಡಿಕೆದಾರರೊಬ್ಬರು ಅಲವತ್ತುಕೊಂಡರು.

ಕಬ್ಬಿಣದ ಅಂಗಡಿ ಮಾಲೀಕ ಮುಜಾಹಿದ್‌ ಸೇರಿದಂತೆ ಹಣ ತೊಡಗಿಸಿರುವ ಇನ್ನೂ ಅನೇಕರು ದೂರು ನೀಡಿಲ್ಲ.

‘ಈವರೆಗೂ ನಗರ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ವಂಚನೆಗೊಳಗಾದವರು ದೂರು ದಾಖಲಿಸಬಹದು’ ಎಂದು ಸಿಪಿಐ ಅಶೋಕ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !