ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ ಬಿಜೆಪಿ, ಜೆಡಿಎಸ್ ನಡುವೆ ಸ್ಪರ್ಧೆ’

ಕಾರ್ಯಕರ್ತರ ಸಭೆಯಲ್ಲಿ ಸಚಿವ ಕೆ. ಗೋಪಾಲಯ್ಯ ಹೇಳಿಕೆ
Last Updated 6 ಡಿಸೆಂಬರ್ 2021, 16:41 IST
ಅಕ್ಷರ ಗಾತ್ರ

ಅರಕಲಗೂಡು: ‘ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಪರ್ಧೆ ಇದ್ದು, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಹೋರಾಟದ ಮೂಲಕ ರಾಜಕೀಯಕ್ಕೆ ಬಂದವರು. ಮೇಲ್ಮನೆಗೆ ಚುನಾಯಿಸಿ ಕಳುಹಿಸುವಂತೆ’ ಮನವಿ ಮಾಡಿದರು.

‘ಕಾಂಗ್ರೆಸ್ ದೇಶದಲ್ಲಿ 50 ವರ್ಷ ಅಧಿಕಾರದಲ್ಲಿದ್ದರೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಯಾವುದೇ ಸಾಧನೆ ಮಾಡಲಿಲ್ಲ. ಕೇವಲ ಏಳು ವರ್ಷಗಳ ಕಡಿಮೆ ಅವಧಿಯಲ್ಲಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಹೆಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಗ್ಗಳಿಕೆ’ ಎಂದು ಹೇಳಿದರು.

‘ಇತ್ತೀಚೆಗೆ ಸುರಿದ ಮಳೆಯಿಂದ ತೀವ್ರ ಬೆಳೆ ಹಾನಿಯಾಗಿದ್ದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ವೀಕ್ಷಿಸಿಕೇಂದ್ರಕ್ಕೆ ವರದಿ ಸಲ್ಲಿಸಿದ್ದು ಶೀಘ್ರದಲ್ಲೇ ಹಾನಿಗೊಳಗಾದವರಿಗೆ ಅಗತ್ಯ ನೆರವು ದೊರೆಯಲಿದೆ’ ಎಂದರು.

ಯೋಗಾ ರಮೇಶ್ ಅವರು ಮರಳಿ ಪಕ್ಷಕ್ಕೆ ಸೇರಿರುವ ಕಾರಣ ತಾಲ್ಲೂಕಿನಲ್ಲಿ ಮತ್ತೆ ಬಿಜೆಪಿಗೆ ಭದ್ರ ಬುನಾದಿಯಾಗಲಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ 3617 ಮತಗಳಿದ್ದು 1500ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತರಿದ್ದಾರೆ. ಉಳಿದ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿಕೆಯಾಗಲಿದ್ದು, ಬಿಜೆಪಿ ಅಭ್ಯರ್ಥಿಗೆ ಗೆಲುವು ಸುಲಭವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಎಚ್.ಎಂ. ವಿಶ್ವನಾಥ್ ಮಾತನಾಡಿ, ‘ಕಾಡಾನೆ ಹಾವಳಿ ಮತ್ತು ಅಕಾಲಿಕ ಮಳೆಯಿಂದ ಇಡೀ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸಂಸದ ಪ್ರಜ್ವಲ್ ಲೋಕಸಭೆಯಲ್ಲಿ ಈ ಕುರಿತು ಧ್ವನಿ ಎತ್ತುತ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಗೆಲುವು ಸಾಧಿಸಿದಂತೆ ಇಲ್ಲಿಯೂ ಜಯ ಸಿಗಲಿದ್ದು ಆತ್ಮಸಾಕ್ಷಿಯಿಂದ ಮತ ನೀಡುವಂತೆ’ ಮನವಿ ಮಾಡಿದರು.

ಬಿಜೆಪಿ ಮುಖಂಡ ಎಚ್. ಯೋಗಾ ರಮೇಶ್ ಮಾತನಾಡಿ, ‘ಜೆಡಿಎಸ್ ಎರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾದ ಸರ್ಕಾರವಿದ್ದಂತೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ತಾಲ್ಲೂಕಿನಲ್ಲಿ ಕಟ್ಟೇಪುರ ನಾಲೆ ಆಧುನೀಕರಣ, ಕಟ್ಟೇಪುರ ಏತ ನೀರಾವರಿ ಯೋಜನೆಗಳಿಗೆ ಹಾಗೂ ಪಟ್ಟಣದ ಕುಡಿಯುವ ನೀರಿನ ಯೋಜನೆ ಸೇರಿದಂತೆ ತಾಲ್ಲೂಕಿನ ಅಭಿವೃದ್ಧಿಗೆ ಅಪಾರ ಅನುದಾನ ನೀಡಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಹಿರಿಯ ಮುಖಂಡ ನಟೇಶ್ ಕುಮಾರ್ ಮಾತನಾಡಿದರು. ಮುಖಂಡರಾದ ರೇಣುಕುಮಾರ್, ಈಶ್ವರ್, ವಿಜಯ್ ವಿಕ್ರಂ, ಖಂಡೇಶ್ವರ್, ಪ್ರಕಾಶ್, ಶಫಿ ಅಹಮದ್, ಶಿವಲಿಂಗಶಾಸ್ತ್ರಿ, ಕೇಶವೇಗೌಡ, ವಿಶ್ವನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT