ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಜಿಲ್ಲೆಯಲ್ಲಿ ಬಿಜೆಪಿ ಚುನಾವಣೆ ತಾಲೀಮು ಶುರು

ಹಾಸನ ಜಿಲ್ಲೆಯಲ್ಲಿ ಕಮಲ ಅರಳಿಸಲು ಕೇಂದ್ರ ಸಚಿವರ ನಿಯೋಜನೆ
Last Updated 7 ಜುಲೈ 2022, 4:56 IST
ಅಕ್ಷರ ಗಾತ್ರ

ಹಾಸನ: ಜೆಡಿಎಸ್‌ನ ಭದ್ರಕೋಟೆಗೆ ಲಗ್ಗೆ ಹಾಕುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯೋನ್ಮುಖವಾಗಿದ್ದು, ಚುನಾವಣೆ ಇನ್ನೂ 10 ತಿಂಗಳು ಇರುವಂತೆಯೇ ತಾಲೀಮು ಶುರು ಮಾಡಿದೆ. ಈಗಾಗಲೇ ಕೇಂದ್ರ ಸಚಿವರು ಜಿಲ್ಲೆಯಲ್ಲಿ ಪ್ರವಾಸ ಆರಂಭಿಸಿದ್ದು, ತಳಮಟ್ಟದಿಂದಲೇ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಜಿಲ್ಲೆಯು ಮೊದಲಿನಿಂದಲೂ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಈಗಿರುವ ಏಳು ಶಾಸಕರಲ್ಲಿ ಆರು ಜನ ಜೆಡಿಎಸ್‌ನವರಾಗಿದ್ದು, ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಂ ಗೌಡ ಜಯಗಳಿಸಿದ್ದಾರೆ. ಇದೀಗ ಉಳಿದ ಅರೂ ಕ್ಷೇತ್ರಗಳು ಹಾಗೂ ಹಾಸನ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಕಾರ್ಯಯೋಜನೆ ರೂಪಿಸಿದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 150 ರ ಗುರಿ ಇಟ್ಟುಕೊಂಡಿರುವ ಬಿಜೆಪಿ, ತನ್ನ ಸಾಮರ್ಥ್ಯ ಕಡಿಮೆ ಇರುವ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಚುರುಕುಗೊಳಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಹಾಸನ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷ್ಣಪಾಲ್‌ ಗುರ್ಜರ್ ಅವರನ್ನು ನಿಯೋಜಿಸಲಾಗಿದೆ.

ಬಿಜೆಪಿಯೇತರ ಪಕ್ಷಗಳ ಸದಸ್ಯರು ಆಯ್ಕೆಯಾಗಿರುವ ಲೋಕಸಭಾ ಕ್ಷೇತ್ರಗಳಿಗೆ ಕೇಂದ್ರದ ಸಚಿವರನ್ನು ನಿಯೋಜಿಸಲಾಗಿದೆ. ಇದೀಗ ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿರುವ ಕೃಷ್ಣಪಾಲ್‌ ಗುರ್ಜರ್ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಹೊಣೆಯನ್ನೂ ನೀಡಲಾಗಿದೆ.

ಎರಡು ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿರುವ ಕೃಷ್ಣಪಾಲ್ ಗುರ್ಜರ್‌, ಪಕ್ಷದ ಕಾರ್ಯಕರ್ತರು, ಕೇಂದ್ರದ ಯೋಜನೆಯ ಫಲಾನುಭವಿಗಳು, ವಿದ್ಯಾರ್ಥಿಗಳು, ರೈತರು, ಆರ್‌ಎಸ್‌ಎಸ್‌ನ ಪ್ರಮುಖರು ಸೇರಿದಂತೆ ಎಲ್ಲ ವರ್ಗದ ಜನರೊಂದಿಗೆ ಸಂವಾದ, ಚರ್ಚೆಗಳನ್ನು ನಡೆಸಿದ್ದಾರೆ.
ಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವುದು ಸದ್ಯಕ್ಕೆ ಬಿಜೆಪಿ ಮುಂದಿರುವ ಸವಾಲು. ಇದಕ್ಕಾಗಿಯೇ ಕೇಂದ್ರದ ಸಚಿವರೊಬ್ಬರ ನೇತೃತ್ವದಲ್ಲಿಯೇ ಪಕ್ಷದ ಸಂಘಟನೆಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ಪ್ರತಿ ಕ್ಷೇತ್ರದಲ್ಲೂ ಕಾರ್ಯಕ್ರಮ: ಹಾಸನ ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್‌, ಪ್ರವಾಸ ಮಾಡಲಿದ್ದಾರೆ. ಎಲ್ಲೆಡೆಯೂ ವಿವಿಧ ವರ್ಗದ ಜನರನ್ನು ಭೇಟಿ ಮಾಡುವ ಮೂಲಕ ಬಿಜೆಪಿಯ ಸಾಧನೆಗಳನ್ನು ಮನವರಿಕೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಪ‍್ರತಿ ತಿಂಗಳು 3 ದಿನ ಪ್ರವಾಸ

ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಕೃಷ್ಣಪಾಲ್‌ ಗುರ್ಜರ್‌ ಪ್ರತಿ ತಿಂಗಳು ಮೂರು ದಿನ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.

‘ಮೊದಲ ಬಾರಿಗೆ ಹಾಸನ ತಾಲ್ಲೂಕನ್ನು ಆಯ್ಕೆ ಮಾಡಿಕೊಂಡಿದ್ದು, ಎರಡು ದಿನಗಳಿಂದ ನಗರದ ವಿವಿಧೆಡೆ ಭೇಟಿ ನೀಡಿದ್ದೇನೆ. ಕೇಂದ್ರ ಸರ್ಕಾರ ಯೋಜನೆಗಳ ಫಲಾನುಭವಿಗಳು, ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರ ಜೊತೆಗೆ ಸಂವಾದ ಹಾಗೂ ಕೇಂದ್ರದ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದ್ದೇನೆ' ಎಂದು ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ತಿಳಿಸಿದ್ದಾರೆ.

ಇದಲ್ಲದೇ ಕೇಂದ್ರ ಸರ್ಕಾರ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಖುದ್ದು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಹೆದ್ದಾರಿ ಕಾಮಗಾರಿ ವೀಕ್ಷಣೆ, ಆನೆ ದಾಳಿಯಿಂದ ಪೀಡಿತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT