ಭಾನುವಾರ, ನವೆಂಬರ್ 17, 2019
21 °C
ಸಿದ್ದರಾಮಯ್ಯ ವಿರುದ್ಧ ಶಾಸಕ ರೇವಣ್ಣ ಆಕ್ರೋಶ

ಬಿಜೆಪಿಗೆ ಜೆಡಿಎಸ್‌ ಒತ್ತೆ ಇಡುತ್ತೇವೆಂದು ಹೇಳಿಲ್ಲ: ಶಾಸಕ ಎಚ್‌.ಡಿ.ರೇವಣ್ಣ

Published:
Updated:
Prajavani

ಹಾಸನ: ಕೋಮುವಾದಿ ಶಕ್ತಿಗಳನ್ನು ದೂರವಿಡಬೇಕೆಂಬ ಪ್ರಾಮಾಣಿಕ ಕಾಳಜಿಯಿದ್ದರೆ ಜೆಡಿಎಸ್‍ನಂತಹ ಜ್ಯಾತ್ಯತೀತ ಪಕ್ಷ ಮುಗಿಸುವಂತಹ ಹುನ್ನಾರ ಕೈ ಬಿಡಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

‘ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಮತ್ತು ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುವ ಏಕೈಕ ಗುರಿಯಿಟ್ಟುಕೊಂಡು ಕಾಂಗ್ರೆಸ್ ಮುಖಂಡರು ಬಿಜೆಪಿಯೊಂದಿಗೆ ಸೇರಿ ಸಂಚು ನಡೆಸಿದ್ದು ರಾಜ್ಯಕ್ಕೆ ಗೊತ್ತಾಗಿದೆ. ಕಾಂಗ್ರೆಸ್‍ನದ್ದು ಬೂಟಾಟಿಕೆಯ ಜಾತ್ಯತೀತೆ‌’ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಬೆಂಬಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಜನಪರ ಕೆಲಸ ಮಾಡುವುದಾದರೆ ಬಿಜೆಪಿಗೆ ತೊಂದರೆ ಕೊಡುವುದಿಲ್ಲವೆಂದು ಹೇಳಿದ್ದಾರೆಯೇ ಹೊರತು, ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡುತ್ತೇವೆಂದಾಗಲಿ, ಬಿಜೆಪಿಗೆ ಜೆಡಿಎಸ್‌ ಒತ್ತೆ ಇಡುತ್ತೇವೆಂದು ಹೇಳಿಲ್ಲ’ ಎಂದು ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದರು.

‘ಮುಖ್ಯಮಂತ್ರಿ ಸ್ಥಾನಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವ ಸಂದರ್ಭ ಬಂದಾಗ ಕುಮಾರಸ್ವಾಮಿ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಬೆಂಬಲ ಕೊಡುತ್ತೇವೆ ಎಂದು ಬಿಜೆಪಿಯ ಕೆಲ ನಾಯಕರು ಹೇಳಿದ್ದರೂ ಒಪ್ಪಲಿಲ್ಲ. ಜೆಡಿಎಸ್ ಯಾವಾಗಲೂ ಬಿಜೆಪಿ ಮತ್ತು ಕಾಂಗ್ರೆಸ್‍ನಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತದೆ’ ಎಂದು ರೇವಣ್ಣ ಸ್ಪಷ್ಟಪಡಿಸಿದರು.

‘ಜೆಡಿಎಸ್ ಸಹವಾಸ ಸಾಕು ಎಂದು ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರ ಉರುಳಿಸುವುದರಲ್ಲಿ ಅಪ್ಪ- ಮಕ್ಕಳು ನಿಸ್ಸೀಮರು ಎಂದೂ ಹೇಳುತ್ತಾರೆ. ಬಿಜೆಪಿ ಸರ್ಕಾರದ ಒಳ್ಳಯೆ ಕೆಲಸ ಸ್ವಾಗತಿಸಿದರೆ ಅದಕ್ಕೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಬಣ್ಣ ಕಟ್ಟುತ್ತಾರೆ’ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಪದೇ, ಪದೇ ಹೇಳುತ್ತಿದ್ದಾರೆ. ಒಳ ಒಪ್ಪಂದ ಮಾಡಿಕೊಂಡು ಏನೇನು ಕೆಲಸ ಮಾಡಿಸಿಕೊಂಡಿದ್ದೇವೆ ಎಂಬುದನ್ನು ತೋರಿಸಲಿ’ ಎಂದು ಸವಾಲು ಹಾಕಿದರು.

‘ಕೆಎಂಎಫ್‌ನ ಪಶು ಆಹಾರ ಕಾರ್ಖಾನೆಗಳಿಗೆ 2 ರಿಂದ 3 ಲಕ್ಷ ಟನ್ ಮೆಕ್ಕೆ ಜೋಳ ಅಗತ್ಯವಿದ್ದು, ರೈತರಿಂದಲೇ ನೇರವಾಗಿ ಖರೀದಿ ಮಾಡಲು ಕೆಎಂಎಫ್‌ಗೆ ಸೂಚನೆ ನೀಡಿ ಎಂದು ಸಿ.ಎಂ ಗೆ ಪತ್ರ ಬರೆದಿದ್ದೆ. ಪತ್ರವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಆದರೆ, ಕೆ.ಆರ್.ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ಅವರ ಪತ್ರಕ್ಕೆ ತಕ್ಷಣ ಸ್ಪಂದಿಸಿ ₹ 10 ಕೋಟಿ ಬಿಡುಗಡೆ ಮಾಡಿ ಟೆಂಡರ್ ಇಲ್ಲದೆ ಕಾಮಗಾರಿ ಮಾಡಲು ಅನುಮತಿ ನೀಡಿದ್ದಾರೆ’ ಎಂದು ಸಿ.ಎಂ ಆದೇಶದ ಪ್ರತಿಯನ್ನು ಬಿಡುಗಡೆ ಮಾಡಿದರು.

‘ಜೆಡಿಎಸ್ ಬಗ್ಗೆ ಪದೇ ಪದೇ ಹರಿಹಾಯುವ ವಿರೋಧ ಪಕ್ಷದ ನಾಯಕರು ತುಮಕೂರು ಡಿಸಿಸಿ ಬ್ಯಾಂಕ್ ಹೇಗೆ ನಡೆಯತ್ತಿದೆ ಎಂಬ ಬಗ್ಗೆಯೂ ಮಾತನಾಡಲಿ ನೋಡೋಣ’ ಎಂದು ಸಿದ್ದರಾಮಯ್ಯಗೆ ರೇವಣ್ಣ ಸವಾಲು ಹಾಕಿದರು.

ಕೆಲ ಕಾಂಗ್ರೆಸ್ ಮುಖಂಡರು ಹಗಲು ಸಿದ್ದರಾಮಯ್ಯ ಅವರೊಂದಿಗೆ ಇದ್ದರೆ, ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಯಲ್ಲಿರುತ್ತಾರೆ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ ಎಂದು ವ್ಯಂಗ್ಯವಾಡಿದರು.

 

 

ಪ್ರತಿಕ್ರಿಯಿಸಿ (+)