ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಕಟ್ಟಡಗಳಿಗೆ ಹಾತೊರೆಯುತ್ತಿರುವ ಅಂಗನವಾಡಿಗಳು

ಖಾಸಗಿ ಕಟ್ಟಡದಲ್ಲಿಯೇ ಚಟುವಟಿಕೆ: ಶಿಥಿಲಾವಸ್ಥೆ ತಲುಪಿದ ಹಲವು ಕೇಂದ್ರಗಳು: ಆಧುನಿಕ ಸೌಕರ್ಯದ ನಿರೀಕ್ಷೆ
Last Updated 11 ಜುಲೈ 2022, 3:10 IST
ಅಕ್ಷರ ಗಾತ್ರ

ಹಾಸನ: ಅಕ್ಷರ ಕಲಿಕೆಯ ಮೊದಲ ಕೇಂದ್ರಗಳಾದ ಅಂಗನವಾಡಿಗಳು ಹಲವಾರು ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿವೆ. ಪುಟಾಣಿ ಮಕ್ಕಳಿಗೆ ಆಟ–ಪಾಠ, ಬಾಣಂತಿಯರು, ಗರ್ಭಿಣಿಯರಿಗೆ ಅಗತ್ಯ ಆಹಾರ ಒದಗಿಸುವ ಕಾರ್ಯವನ್ನು ಈ ಕೇಂದ್ರಗಳು ಮಾಡುತ್ತಿದ್ದು, ಇಂತಹ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಆಗಬೇಕು ಎನ್ನುವ ಒತ್ತಾಯ ಹೆಚ್ಚಾಗಿದೆ.

ಜಿಲ್ಲೆಯ 2,548 ಅಂಗನವಾಡಿ ಕೇಂದ್ರಗಳಲ್ಲಿ 71,183 ಮಕ್ಕಳು ದಾಖಲಾಗಿದ್ದು, 4,681 ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಕೆಲವೆಡೆ ಕಟ್ಟಡಗಳು ಹಳೆಯದಾಗಿದ್ದರೆ, ಕೆಲವೆಡೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್ ಅವರ ಎದುರೇ ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಸಮಸ್ಯೆಯ ಅನಾವರಣವೂ ಆಗಿದೆ.

ಹಳೇಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕೆಂದ್ರಗಳಿಗೆ ಸುಸಜ್ಜಿತವಾದ ಹೊಸ ಕಟ್ಟಡಗಳಿಲ್ಲದೆ ಮಕ್ಕಳ ಚಟುವಟಿಕೆಗೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬೇಲೂರು ರಸ್ತೆಯಲ್ಲಿ ಹೆದ್ದಾರಿ ಪ್ರಾಧಿಕಾರದವರು ಗಿಡಗ.ಟೆ ತೆರವು ಮಾಡದೆ ಇರುವುದರಿಂದ ಅಂಗನವಾಡಿ ಕೇಂದ್ರದ ಒಳಗೆ ಪ್ರವೇಶಿಸಲು ಮಕ್ಕಳು ಹಾಗೂ ಪೋಷಕರಿಗೆ ತೊಂದರೆಯಾಗುತ್ತಿದೆ.

ಭೂದಿಗುಂಡಿ ಬಡಾವಣೆಯಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಾಣ ವಿಳಂಬವಾಗಿದೆ. ಹೀಗಾಗಿ ಪಶು ಆಸ್ಪತ್ರೆ ಪಕ್ಕದ ಮಹಿಳಾ ಸಮಾಜದ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಹೊಯ್ಸಳೇಶ್ವರ ದೇವಾಲಯ ರಸ್ತೆ ದಾಟಿ ಭೂದಿಗುಂಡಿಯ ಪುಟ್ಟ ಮಕ್ಕಳು ಕಷ್ಟಪಟ್ಟು ಅಂಗನವಾಡಿಗೆ ಬಂದು ಹೋಗುವಂತಾಗಿದೆ.

ಪರಿಶಿಷ್ಟ ಜನಾಂಗದ ಕಾಲೊನಿಯ ಅಂಗನವಾಡಿ ಕಟ್ಟಡ ತೀರಾ ಶಿಥಿಲವಾಗಿದೆ. ಕೇಂದ್ರದ ಮುಂದೆ ಚರಂಡಿ ಇರುವುದರಿಂದ ಕೊಚ್ಚೆ ನಿಂತಾಗ ಸೊಳ್ಳೆ ಹಾವಳಿ ಹೆಚ್ಚಾಗಿರುತ್ತದೆ. ಚೀಲನಾಯ್ಕನಹಳ್ಳಿಯ ಅಂಗನವಾಡಿ ಕಟ್ಟಡ ಸಹ ತೀರಾ ಹಳೆಯದಾಗಿದೆ. ಪುಟ್ಟಮಕ್ಕಳ ಸುರಕ್ಷತೆಗಾಗಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯವರು ಹೊಸ ಕಟ್ಟಡಗಳನ್ನು ನಿರ್ಮಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.

ಹಿರೀಸಾವೆ ಹೋಬಳಿಯಲ್ಲಿ 12ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳು ಶಾಲಾ ಕಟ್ಟಡ ಮತ್ತು ಖಾಸಗಿ ಮನೆಯಲ್ಲಿ ನಡೆಯುತ್ತಿವೆ. ಬಹುತೇಕ ಅಂಗನವಾಡಿಗಳಲ್ಲಿ ಸಿಬ್ಬಂದಿ ಇದ್ದಾರೆ.

ಬೆಳಗೀಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾರಡಿಹಳ್ಳಿ, ಕಟಿಗಿಹಳ್ಳಿ, ಕಾವಲಹೊಸೂರು ಕಟ್ಟಡಗಳು ಹಾಳಾಗಿವೆ. ಹೆಗ್ಗಡಿಹಳ್ಳಿ ಮತ್ತು ಕಾವಲಹೊಸೂರು ಅಂಗನವಾಡಿಗಳು ಖಾಸಗಿ ಮನೆಯಲ್ಲಿ ನಡೆಯುತ್ತಿವೆ. ಜಿನ್ನೇಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಂ.ಕೆ. ಚಿಕ್ಕೋನಹಳ್ಳಿ, ಎಂ.ಕೆ. ಹೊಸೂರು. ದಿಡಗ ಪಂಚಾಯಿತಿಯ ಕಾಮನಘಟ್ಟ, ಕರಿಕ್ಯಾತನಹಳ್ಳಿ, ನರಿಹಳ್ಳಿ ಅಂಗನವಾಡಿ ಕಟ್ಟಡ ದುರಸ್ತಿ ಆಗಬೇಕಿದೆ.

ನಾಗನಹಳ್ಳಿ ಬಿದರಕೆರೆ, ಬಿಳಿಕೆರೆ ಗ್ರಾಮಗಳಲ್ಲಿ ಶಾಲಾ ಕಟ್ಟಡಗಳಲ್ಲಿ ನಡೆಯುತ್ತಿವೆ. ಕಬ್ಬಳಿ ಗ್ರಾಮಕ್ಕೆ 2019 ರಲ್ಲಿ ಕಟ್ಟಡ ಕಟ್ಟಡಲು ಅನುದಾನ ಬಿಡುಗಡೆಯಾಗಿತ್ತು, ಈಗ ಕಾಮಗಾರಿ ಪ್ರಾರಂಭವಾಗಿದೆ. ಬಾಳಗಂಚಿ ಪಂಚಾಯಿತಿ ಬ್ಯಾಡರಹಳ್ಳಿ ಕಟ್ಟಡ ನಿರ್ಮಾಣ ಆಗಬೇಕಿದೆ.

‘ಹಿರೀಸಾವೆ ಪಂಚಾಯಿತಿಯ ಕೊಳ್ಳೇನಹಳ್ಳಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ, ಜಾಗದ ಸಮಸ್ಯೆ ಇದ್ದು, ಪರಿಹರಿಸಿ ಸದ್ಯದಲ್ಲಿ ನಿರ್ಮಾಣ ಮಾಡಲಾಗುವುದು’ ಎನ್ನುತ್ತಾರೆ ಪಿಡಿಒ ದರ್ಶನ್.

‘ಮಸಕನಹಳ್ಳಿ ಮತ್ತು ಬಿಳಿಕೆರೆ ಕಾಲೊನಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯೂ ಆರ್‌ಸಿಸಿ ಹಂತದಲ್ಲಿದೆ’ ಎನ್ನುತ್ತಾರೆ ದಿಡಗ ವೃತ್ತದ ಅಂಗನವಾಡಿಗಳ ಮೇಲ್ವಿಚಾರಕಿ ಪಾರ್ವತಮ್ಮ.

‘ಹೋಬಳಿಯ ಮಾಚಬೂವನಹಳ್ಳಿ ಮತ್ತು ಅಂತನಹಳ್ಳಿ ಗ್ರಾಮಗಳಲ್ಲಿ ಅಂಗನವಾಡಿ ತೆರೆಯಲು ಇಲಾಖೆಗೆ ಅನುಮತಿಗೆ ಪತ್ರ ಬರೆಯಲಾಗಿದೆ’ ಎಂದು ಅಂಗನವಾಡಿ ಮೇಲ್ವಿಚಾರಕಿ ಮಮತಾ ತಿಳಿಸಿದ್ದಾರೆ.

ಆಲೂರು ತಾಲ್ಲೂಕಿನಲ್ಲಿ ಒಟ್ಟು 178 ಅಂಗನವಾಡಿ ಕೇಂದ್ರಗಳಿವೆ. 144 ಕೇಂದ್ರಗಳು ಸರ್ಕಾರಿ ಕಟ್ಟಡ ಹೊಂದಿವೆ. ಉಳಿದಂತೆ 18 ಕೇಂದ್ರಗಳು ಖಾಸಗಿ, ಸಮುದಾಯ ಭವನ ಮತ್ತು ಮುಚ್ಚಿರುವ 16 ಶಾಲೆಗಳಲ್ಲಿ ನಡೆಯುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಎ. ಟಿ. ಮಲ್ಲೇಶ್ ತಿಳಿಸಿದ್ದಾರೆ. ಆಲೂರು ಪಟ್ಟಣದ ಖಾಜಿ ಮೊಹಲ್ಲಾದಲ್ಲಿ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ.

ಬೇಲೂರು ತಾಲ್ಲೂಕಿನಲ್ಲಿ 301 ಅಂಗನವಾಡಿ ಕೇಂದ್ರಗಳಿದ್ದು, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸಲು ಶಾಸಕರು ಹಾಗೂ ಸ್ಥಳೀಯ ಆಡಳಿತದೊಂದಿಗೆ ಚರ್ಚಿಸಲಾಗಿದೆ ಎಂದು ಸಿಡಿಪಿಒ ದಿಲೀಪ್‌ ತಿಳಿಸಿದ್ದಾರೆ.

ನಿರ್ವಹಣೆ: ಚಿದಂಬರಪ್ರಸಾದ
ಪೂರಕ ಮಾಹಿತಿ: ಎಚ್.ಎಸ್.ಅನಿಲ್ ಕುಮಾರ್, ಹಿ.ಕೃ. ಚಂದ್ರು, ಸಿದ್ಧರಾಜು, ಎಂ.ಪಿ.ಹರೀಶ್, ಮಲ್ಲೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT