ಸೋಮವಾರ, ಸೆಪ್ಟೆಂಬರ್ 16, 2019
27 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌

ಭಯೋತ್ಪಾದನೆಗೆ ಕಡಿವಾಣ ಹಾಕಿದ ಬಿಜೆಪಿ

Published:
Updated:
Prajavani

ಹಾಸನ: ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಭಯೋತ್ಪಾದನೆ ಕಡಿವಾಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲೂ ಭಯೋತ್ಪಾದನೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿತ್ತು. ಆದರೆ, ಮನಮೋಹನ ಸಿಂಗ್‌ ಸರ್ಕಾರದಲ್ಲಿ ಬಾಂಬ್‌ ಸ್ಫೋಟ ಘಟನೆಗಳು ನಡೆದವು. ಉದಾಹರಣೆಗೆ ಬೆಂಗಳೂರಿನ ಬಿಜೆಪಿ ಕಚೇರಿ ಎದುರೇ ಬಾಂಬ್‌ ಸ್ಫೋಟಿಸಲಾಗಿತ್ತು ಎಂದರು.

ಸಿದ್ಧಾಂತ, ಕಾರ್ಯ ಪದ್ಧತಿಯಲ್ಲಿ ಬಿಜೆಪಿ ರಾಜಿ ಇಲ್ಲ. ಒಂದೇ ಧ್ವಜ, ಒಂದೇ ಸಂವಿಧಾನ. ಪಕ್ಷಕ್ಕಿಂತ ದೇಶ ಶ್ರೇಷ್ಠ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಲವು ದೇಶಗಳು ಪ್ರಧಾನಿ ಮೋದಿ ಅವರ ಪ್ರವಾಸಕ್ಕೆ ಕಾಯುತ್ತಿವೆ. ಅರಬ್‌ ದೇಶದ ದೊರೆ ಗಣಪತಿ ದೇವಸ್ಥಾನಕ್ಕಾಗಿ 21 ಎಕರೆ ಜಾಗ ನೀಡಿದ್ದಾರೆ. ಜಗತ್ತಿಗೆ ಜ್ಞಾನ ಕೊಟ್ಟ ಭಾರತದ ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಬೇಕು ಎಂದು ನುಡಿದರು.

ದೇಶದಲ್ಲಿ ಬಿಜೆಪಿ ಪರ ಜನರು ಒಲವು ತೋರುತ್ತಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿಗೆ ಈಗ ಸ್ವರ್ಣ ಯುಗ. ಕಾಂಗ್ರೆಸ್‌ ಲೋಕಸಭೆಯಲ್ಲೂ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಅನರ್ಹವಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸಿದ್ದಾರೆ ಎಂದರು.

ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಬಂಧನ ಕುರಿತು ಪ್ರಸ್ತಾಪಿಸಿದ ನಳಿನ್‌, ಕಾನೂನು ಎಲ್ಲರಿಗೂ ಒಂದೇ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವವರು ಜಾರಿ ನಿರ್ದೇಶನಾಲಯಕ್ಕೆ ದಾಖಲೆ ಹಾಜರುಪಡಿಸಿ, ನಿರ್ದೋಷಿ ಆಗಬೇಕಿತ್ತು. ಬೀದಿಗೆ ಬಂದು ಕಲ್ಲು ತೂರಾಟ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಎಲ್ಲರೂ ಶ್ರಮಿಸಬೇಕು. ಮುಂದಿನ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಪ್ರತಿವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಬಾವುಟ ಹಾರಿಸಬೇಕು. ಅದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಘಟನಾ ಕಾರ್ಯದರ್ಶಿ ಅರುಣ್‌ ಮಾತನಾಡಿ, ಹಳ್ಳಿಯಿಂದ ದಿಲ್ಲಿವರೆಗೆ, ಪಂಚಾಯಿತಿಯಿಂದ ಪಾರ್ಲಿಮೆಂಟ್‌ ವರೆಗೆ ಬಿಜೆಪಿ ಅಧಿಕಾರದಲ್ಲಿರಬೇಕು. ಪಕ್ಷ ಬಲಪಡಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ ಹಾಜರಿದ್ದರು.

Post Comments (+)