ಶನಿವಾರ, ಫೆಬ್ರವರಿ 22, 2020
19 °C
ದೇಶದ ಜನರು ಒಪ್ಪುವ ರೀತಿ ಕಾನೂನು ರೂಪಿಸಲು ಆಗ್ರಹ

ಸಿಎಎ ವಿರುದ್ಧ ಬೀದಿಗಿಳಿದ ಜೆಡಿಎಸ್‌–ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ಹಾಗೂ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ಶನಿವಾರ ಹಾಸನದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ಬೀದಿಗಿಳಿದು ಹೋರಾಟ ನಡೆಸಿದರು.

ಇತ್ತೆಹಾದೆ ಮಿಲ್ಲತ್ ಸಮಿತಿ, ದಲಿತ ಮತ್ತು ಪ್ರಗತಿಪರ ಸಂಘಟನೆ ಹಾಗೂ ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಶನಿವಾರ ಏರ್ಪಡಿಸಿದ್ದ ’ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ’ ಸಮಾವೇಶದಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.

ಉಭಯ ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ, ಸಿಎಎ, ಎನ್‌ಆರ್‌ಸಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ, ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಹಿಂದೂಗಳಲ್ಲದೆ ವಿವಿಧ ಜಾತಿ, ಧರ್ಮದ ಜನರು ಇದ್ದಾರೆ. ಕಾನೂನು ರೂಪಿಸುವಾಗ ದೇಶದ ಎಲ್ಲ ಜನರು ಒಪ್ಪುವ ರೀತಿ ಕಾನೂನು ರೂಪಿಸಬೇಕು ಎಂದು ಹೇಳಿದರು.

'ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರಧಾನಿ ಪಣತೊಟ್ಟಿದ್ದಾರೆ. ಆದರೆ ಅದು ಸುಲಭವಲ್ಲ. ಗಾಂಧೀಜಿ ಕೊಲೆ ಮಾಡಿದ ಹಿನ್ನೆಲೆಯವರು ದೇಶ ಆಳುತ್ತಿದ್ದಾರೆ. ಗಾಂಧಿ ಕೊಲೆ ಮಾಡಲು ಸಹಕರಿಸಿದವರಿಗೆ ಭಾರತ ರತ್ನ ನೀಡುವಂತ ಪರಿಸ್ಥಿತಿ ಇದೆ. ಬಡತನ, ನಿರುದ್ಯೋಗ, ಆರ್ಥಿಕ ಹಿಂಜರಿತ ಸೇರಿದಂತೆ ನೂರಾರು ಸಮಸ್ಯೆಗಳ ಮರೆ ಮಾಚುವ ಸಲುವಾಗಿ, ಸಿಎಎ ಕಾಯ್ದೆ ಜಾರಿಗೆ ತರಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸುಪ್ರಿಂ ಕೋರ್ಟ್ ಕೂಡ ಇಂದಿನ ದಿನಗಳಲ್ಲಿ ಬಲ ಕಳೆದುಕೊಳ್ಳುತ್ತಿದೆ. ನ್ಯಾಯ ಸಿಗದಿದ್ದಾಗ ಕೋರ್ಟ್‌ ಮೊರೆ ಹೋಗುತ್ತೇವೆ. ಆದ್ದರಿಂದ ನ್ಯಾಯಾಲಯಗಳು ಘನತೆ ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಸಾಮಾಜಿಕ ಕಾರ್ಯಕರ್ತ ಜಫ್ರುಲ್ಲಾ ಖಾನ್, ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಶಾಸಕರಾದ ಎಚ್.ಡಿ. ರೇವಣ್ಣ, ಯು.ಟಿ. ಖಾದರ್, ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಶಕೀಬ್ ಸಾಬ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಖ್ , ಎಂ.ಎ. ಗೋಪಾಲ್ ಸ್ವಾಮಿ, ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಪಟೇಲ್ ಶಿವಪ್ಪ, ಎಚ್.ಜಿ. ಮಹೇಶ್, ವಿಕಾಸ್‌ ಚೌದರಿ ಎಚ್.ಎಸ್. ಅನಿಲ್ ಕುಮಾರ್, ಹೋರಾಟಗಾರ್ತಿ ಅಮೂಲ್ಯ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು