ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಂದ್‌ ಬೆಂಬಲಿಸಲು ಕರೆ

ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸಲು ಆಗ್ರಹ
Last Updated 2 ಡಿಸೆಂಬರ್ 2020, 15:31 IST
ಅಕ್ಷರ ಗಾತ್ರ

ಹಾಸನ: ಮರಾಠ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು ಎಂದು ಒತ್ತಾಯಿಸಿ ಡಿ.5 ರಂದು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಕರ್ನಾಟಕ ಬಂದ್‌ ಮಾಡುವ ಕರೆಗೆ ಕನ್ನಡಿಗರೂ ಬೆಂಬಲ ನೀಡಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರಾದ ವಾಟಾಳ್‌ ನಾಗರಾಜ್‌ ಮತ್ತು ಸಾ.ರಾ. ಗೋವಿಂದ್‌ ಮನವಿ ಮಾಡಿದರು.

ಮಾರಾಠ ಅಭಿವೃದ್ಧಿ ನಿಗಮ ಹಿಂಪಡೆಯದಿದ್ದರೆ ನಾಳೆ ಕೇರಳ, ತಮಿಳುನಾಡಿನವರು ನಿಗಮ ಸ್ಥಾಪಿಸುವಂತೆ ಕೇಳುತ್ತಾರೆ. ಆಗ ಎಲ್ಲಾರಿಗೂ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತೀರಾ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ವಾಟಾಳ್‌ ನಾಗಾರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಗೋವಾದಲ್ಲಿ ಶೇಕಡಾ 40ರಷ್ಟು ಕನ್ನಡಿಗರಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಕನ್ನಡಿಗರಿದ್ದಾರೆ. ಅವರಿಗೆ ಈ ರೀತಿ ಸೌಲಭ್ಯಗಳನ್ನು ನೀಡಲಾಗಿದೆಯೇ? ಮರಾಠ ಅಭಿವೃದ್ಧಿ ನಿಗಮ ರಚಿಸಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಜೈಲಿಗೂ ಹೋಗುತ್ತೇವೆ ಎಂದರು.

ವಿವಿದ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಹೋಟೆಲ್‌ಗಳ ಮಾಲೀಕರು, ಟ್ಯಾಕ್ಸಿ, ಆಟೊ, ತರಕಾರಿ ಮತ್ತು ಫುಟ್ ಪಾತ್ ವ್ಯಾಪಾರಿಗಳು ಸಹಕರಿಸುತ್ತಿದ್ದಾರೆ. ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಬರಬೇಡಿ. ವಕೀಲರು ಕನ್ನಡಿಗರ ಪರವಾಗಿ ನಿಂತಿದ್ದಾರೆ. ಜೈಲಿಗೆ ಹೋದರೂ ಚಿಂತೆಯಿಲ್ಲ. ಹೋಟೆಲ್ ಮತ್ತು ಅಂಗಡಿಗಳ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿಸಬೇಕು ಎಂದು ಹೋರಾಟಗಾರರಿಗೆ ಸೂಚನೆ ನೀಡಿದರು.

ಸಾ.ರಾ. ಗೋವಿಂದ್‌ ಮಾತನಾಡಿ, ಕೇವಲ ಎರಡು ವಿಧಾನಸಭಾ ಗೆಲ್ಲುವುದಕ್ಕಾಗಿ ಕನ್ನಡಿಗರ ಸ್ವಾಭಿಮಾನಕ್ಕೆ ಅಪಮಾನ ಮಾಡಲಾಗಿದೆ. ರಾಜ್ಯದಲ್ಲಿ ಕಾವೇರಿ ಸಮಸ್ಯೆ, ಮೇಕೆದಾಟು, ಮಹಾದಾಯಿ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಸಿಎಂ ಗೆ ಕಾಳಜಿ ಇಲ್ಲ. ಗೋಗರೆದರೂ ಕನ್ನಡಾಭಿವೃದ್ಧಿ ಪ್ರಾಧಿಕಾರಕ್ಕೆ ₹2 ಕೋಟಿ ಕೊಡುವುದಿಲ್ಲ. ಆದರೆ, ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ಮೀಸಲಿಡಲಾಗಿದೆ. ಬಿಜೆಪಿ ನಾಯಕರಲ್ಲೇ ಅದಕ್ಕೆ ವಿರೋಧವಿದೆ ಎಂದರು.

ಮರಾಠ ಅಭಿವೃದ್ಧಿ ನಿಗಮ ರಚಿಸುವ ಮೊದಲು, ಆಡಳಿತ ಪಕ್ಷ, ವಿರೋಧ ಪಕ್ಷದ ನಾಯಕರು, ಸಾಹಿತಿಗಳು, ರೈತರು, ಕನ್ನಡ ಪರ ಹೋರಾಟಗಾರರು ಕರೆದು ಚರ್ಚೆ ಮಾಡಿದ್ದಾರೆಯೇ? ಹಿಂದೆ ಗೋಕಾಕ್ ಚಳುವಳಿಯನ್ನ ನೆನಪಿಸಿಕೊಳ್ಳಿ, 40 ವರ್ಷ ಅಧಿಕಾರ ಮಾಡಿದ ಪಕ್ಷವನ್ನು ಅಧಿಕಾರದಿಂದ ಕಿತ್ತೆಸದರು. ಮುಂದೆ ರಾಜ್ಯ ಸರ್ಕಾರಕ್ಕೂ ಅಂತಹ ಸ್ಥಿತಿ ಬರಬಹುದು ಎಂದು ಕಿಡಿ ಕಾರಿದರು.

ಡಿ.5 ರಂದು ಹೋರಾಟ ಮಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಸರ್ಕಾರ ಹೇಳಿದೆ. ಕಠಿಣ ಕ್ರಮ ಎಂದರೆ ಏನು? ಗುಂಡು ಹಾರಿಸುತ್ತಾರೋ ಅಥವಾ ಜೈಲಿಗೆ ಕಳಿಸುತ್ತಾರೋ?. ಈ ಹಿಂದಿನ ಯಾವುದೇ ಮುಖ್ಯಮಂತ್ರಿಯೂ ಕನ್ನಡಪರ
ಹೋರಾಟಗಾರರ ವಿರುದ್ಧ ಈ ರೀತಿ ಹೇಳಿಕೆ ನೀಡಿರಲಿಲ್ಲ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ವಕೀಲ ದೇವರಾಜೇಗೌಡ, ಬಾಗೂರು ಮಂಜೇಗೌಡ, ಬಾಳ್ಳುಗೋಪಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT