ಶನಿವಾರ, ಡಿಸೆಂಬರ್ 7, 2019
21 °C

ಸಿಬಿಐ ಹಣೆಬರಹ ಮುಗಿಸಿದ್ರು, ಇನ್ನೇನು ಉಳಿಸಿದ್ದಾರೆ:ಮೋದಿ ವಿರುದ್ಧ ದೇವೇಗೌಡ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ₹ 35 ಸಾವಿರ ಕೋಟಿ ಅಕ್ರಮ ನಡೆದಿದೆ ಎಂಬ ಬಿಜೆಪಿ ಆರೋಪವನ್ನು ಸಂಸದ ಎಚ್.ಡಿ.ದೇವೇಗೌಡ ಅಲ್ಲಗಳೆದಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೌಡರು, ‘ಸಿಎಜಿ (ಮಹಾ ಲೆಕ್ಕ ಪರಿಶೋಧಕರ) ವರದಿ ಆಧರಿಸಿ ಬಿಜೆಪಿಯವರು ಕಠಿಣ ಶಬ್ದ ಬಳಸಿ ಕಿರುಹೊತ್ತಗೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರೇ ಉತ್ತರ ಕೊಟ್ಟಿದ್ದಾರೆ. ಐದು ವರ್ಷ ದಕ್ಷತೆಯಿಂದ ಆಡಳಿತ ನಡೆಸಿದ್ದು, ಅಂಥ ತಪ್ಪು ಮಾಡಿರಲು ಸಾಧ್ಯವಿಲ್ಲ’ ಎಂದು ಸಮರ್ಥಿಸಿಕೊಂಡರು.

‘ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆ ಇಲ್ಲ. ಆದರೆ ಕಾಂಗ್ರೆಸ್ ದೊಡ್ಡ ಪಕ್ಷ. ಸೌಹಾರ್ದವಾಗಿ ಚರ್ಚೆ ಮಾಡಿದ ನಂತರ 22 ರಂದು ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ’ ಎಂದರು.

ಇದೇ ತಿಂಗಳ 11 ರಂದು ಹೊರ ಬೀಳುವ ಪಂಚರಾಜ್ಯಗಳ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ‘ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವಾತಾವರಣ ಇದೆ. ರಾಜಾಸ್ಥಾನದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಉಳಿದ ಕಡೆಗಳಲ್ಲಿ ಅತಂತ್ರ ಪರಿಸ್ಥಿತಿ ಇದೆ. ಒಂದು ವೇಳೆ ಐದೂ ರಾಜ್ಯಗಳಲ್ಲಿ ಜನರು ಒಂದೇ ಪಕ್ಷದ ಕಡೆ ತೀರ್ಪು ನೀಡಿದರೆ, ಅದರ ಪರಿಣಾಮ‌ ಮುಂದಿನ ಲೋಕಸಭೆ ಚುಬಾವಣೆ ಮೇಲೆ ಬೀರಲಿದೆ’ ಎಂದು ಪ್ರಶ್ನೆಗೆ ಉತ್ತರಿಸಿದರು.

ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗೌಡರು, ‘ಚುನಾವಣೆ ಬಂದಾಗ ಬಿಜೆಪಿಯವರು ಹಾಗೂ ಕೆಲವು ಮಠಾಧೀಶರು ರಾಮಮಂದಿರ ನಿರ್ಮಾಣ ಜಪ ಮಾಡುತ್ತಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಇವರು ಯಾವುದೇ ಸಾಧನೆ ಮಾಡಿಲ್ಲವೇ? ಹಾಗೆ ಮಾಡಿದ್ದರೆ ರಾಮನ ಜಪ ಏಕೆ ಮಾಡುತ್ತಿದ್ದರು’ ಎಂದು ಬಿಜೆಪಿ ನಡೆಗೆ ಕಿಡಿ ಕಾರಿದರು.

‘ಚುನಾವಣೆ ಹತ್ತಿರ ಬಂದಿರುವುದರಿಂದ ಮತ್ತೆ ರಾಮ ಮಂದಿರ ವಿಚಾರ ಬಂದಿದೆ. ದಕ್ಷಿಣದಲ್ಲಿ ಶಬರಿಮಲೆ, ಉತ್ತರದಲ್ಲಿ ರಾಮಮಂದಿರ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸಿಬಿಐ ಹಣೆಬರಹ ಮುಗಿಸಿದ್ದು, ರಿಸರ್ವ್ ಬ್ಯಾಂಕ್ ಅನ್ನು ತಮ್ಮ ಹಿಡಿತಕ್ಕೆ ಪಡೆಯಲು ಯತ್ನಿಸಿದರು. ಇನ್ನೇನು ಉಳಿಸಿದ್ದಾರೆ’ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದರು.

‘ಇದೆಲ್ಲವನ್ನು ನೋಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ಸಂಶಯ ಬಿಜೆಪಿಗೆ ಬಂದಿರಬೇಕು’ ಎಂದು ನಸು ನಕ್ಕರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು