ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಜನಗಳ ಬಗ್ಗೆ ಪ್ರಧಾನಿಗೆ ಖುದ್ದು ತಿಳಿಸಿ

ಕೇಂದ್ರ ಸಚಿವರ ಸಂವಾದ: ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗಿ
Last Updated 6 ಜುಲೈ 2022, 3:57 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷ್ಣ ಪಾಲ್‌ ಗುರ್ಜರ್‌ ಅವರು, ನಗರದ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜೊತೆಗೆ ಮಂಗಳವಾರ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಫಲಾನುಭವಿಗಳು ಯೋಜನೆಯಿಂದ ಆಗಿರುವ ಪ್ರಯೋಜನ, ಇರುವ ಅಡೆತಡೆಗಳ ಕುರಿತು ಮುಕ್ತವಾಗಿ ಮಾತನಾಡಿದರು. ಯೋಜನೆಗಳ ಪ್ರಯೋಜನ ಪಡೆಯುವ ವೇಳೆ ಅಧಿಕಾರಿಗಳ ವರ್ತನೆ ಮತ್ತು ಹೆಚ್ಚುವರಿ ಹಣ ನೀಡಬೇಕಾಯಿತೇ ಎಂದು ಕೃಷ್ಣ ಪಾಲ್‌ ಗುರ್ಜರ್‌, ಫಲಾನುಭವಿಗಳನ್ನು ಪಶ್ನಿಸಿದರು.

ಯೋಜನೆಗಳ ಲಾಭದ ಬಗ್ಗೆ ಖುದ್ದಾಗಿ ಪ್ರಧಾನಿಗೆ ಪತ್ರ ಬರೆದು ತಿಳಿಸಿ. ಯೋಜನೆಯಿಂದ ನೀವು ಯಾವ ರೀತಿ ಪ್ರಯೋಜನ ಪಡೆದಿದ್ದೀರಿ? ಏನೆಲ್ಲ ಅನುಕೂಲಗಳು ದೊರೆತಿವೆ ಎಂಬುದನ್ನು ಪ್ರಧಾನಿಗೆ ಖುದ್ಧು ಫಲಾನುಭವಿಗಳೇ ತಿಳಿಸುವಂತೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ದೇಶದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಮೋದಿ ಅವರ ನಾನಾ ಯೋಜನೆಗಳು ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹ ಶ್ರಮ ವಹಿಸುತ್ತಿದೆ ಎಂದು ತಿಳಿಸಿದರು.

ಇದರ ಮುಂದುವರಿದ ಭಾಗವಾಗಿ ಜಿಲ್ಲೆಯ ಪ್ರತಿ ತಾಲ್ಲೂಕಿನ ಪ್ರಜೆಗೆ ಕೇಂದ್ರದ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಮೂರು ದಿನ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯೋಜನೆ ಸಫಲತೆ ಹಾಗೂ ಪ್ರಚಾರದ ಬಗ್ಗೆ ಗಮನಹರಿಸಲಾಗುತ್ತಿದೆ. ಹಾಸನ ತಾಲ್ಲೂಕಿನ ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು ಸಂವಾದದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಗೆ ಉತ್ತಮ ಮಾರಾಟ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಅಗತ್ಯವಿದೆ. ನೆರವು ಒದಗಿಸುವಂತೆ ಕೇಂದ್ರ ಸಚಿವರಲ್ಲಿ ಗೋಪಾಲಯ್ಯ ಮನವಿ ಮಾಡಿದರು.

ಫಲಾನುಭವಿಗಳ ಮಾತು: ‘ಕೇಂದ್ರ ಸರ್ಕಾರದ ಸಂಜೀವಿನಿ ಯೋಜನೆಯಲ್ಲಿ ₹40ಸಾವಿರ ಸಾಲ ಪಡೆದು ಇಂದು ಸ್ವಾವಲಂಬಿ ಉದ್ಯೋಗ ನಡೆಸುತ್ತಿದ್ದು, ನಾಲ್ವರಿಗೆ ಉದ್ಯೋಗ ನೀಡುವಂತಹ ಸ್ಥಿತಿಗೆ ತಲುಪಿದ್ದೇನೆ’ ಎಂದು ಫಲಾನುಭವಿ ರೂಪಾ ತಿಳಿಸಿದರು.

‘ಸ್ವಚ್ಛ ಭಾರತ ಅಭಿಯಾನದಡಿ ಪಂಚಾಯಿತಿಯಿಂದ ನೀಡಲಾದ ಪರಿಹಾರದಿಂದ ಶೌಚಾಲಯ ನಿರ್ಮಿಸಿಕೊಂಡಿದ್ದು ₹12 ಸಾವಿರ ಧನಸಹಾಯ ಸಿಕ್ಕಿದೆ. ಇಂದು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಶಾಂತಿಗ್ರಾಮದ ಶಕುಂತಲಾ ತಿಳಿಸಿದರು.

‘ಹೃದಯ ಸಮಸ್ಯೆಯಿಂದ ಬಳಲುತ್ತಿದ್ದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಒಳಗಾಗಿದ್ದು, ಯೋಜನೆಯಿಂದ ಬಂದ ₹60 ಸಾವಿರ ಧನಸಹಾಯ ನೆರವಿಗೆ ಬಂದಿದ್ದು, ಮೋದಿ ಅವರ ಸಹಾಯ ಸ್ಮರಣೀಯ’ ಎಂದು ತಾಲ್ಲೂಕಿನ ಗೃಹಿಣಿ ಹರಿಣಿ ಹೇಳಿದರು.

ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಜಗದೀಶ್, ವಾರ್ತಾಧಿಕಾರಿ ವಿನೋದ ಚಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

‘ಭ್ರಷ್ಟಾಚಾರ ಮುಕ್ತ ಆಡಳಿತ’

‘ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿದರು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೂಲಕ ಪ್ರತಿಯೊಬ್ಬ ಪ್ರಜೆಗೂ ಉತ್ತಮ ಪ್ರಧಾನಿಯಾಗಿ ಕಾಣುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಕೃಷ್ಣ ಪಾಲ್‌ ಗುರ್ಜರ್‌ ಹೇಳಿದರು.

‘ದೇಶದಲ್ಲಿ ಶೂನ್ಯ ಮೊತ್ತದ ಬ್ಯಾಂಕ್ ಖಾತೆ ತೆರೆಯಲು ಪ್ರೇರೇಪಿಸುವ ಮೂಲಕ ಪ್ರತಿಯೊಬ್ಬ ಪ್ರಜೆಗೆ ಸರ್ಕಾರದ ಸೌಲಭ್ಯ ನೇರವಾಗಿ ತಲುಪುವಂತೆ ಮಾಡಲಾಗಿದೆ. ದೇಶದಲ್ಲಿ ಈಗಾಗಲೇ 45 ಕೋಟಿಗೂ ಅಧಿಕ ಮಂದಿ ಖಾತೆ ಹೊಂದಿದ್ದು, ಕೋವಿಡ್–19 ಹಾವಳಿ ಸಂದರ್ಭದಲ್ಲಿ 20 ಕೋಟಿ ಮಹಿಳೆಯರು ಮೂರು ತಿಂಗಳು ತಲಾ ₹5 ಸಾವಿರ ಸಹಾಯಧನ ಪಡೆಯಲು ಇದು ನೆರವಿಗೆ ಬಂದಿದೆ‌’ ಎಂದರು.

ಕಿಸಾನ್ ಸಮ್ಮಾನ್‌ ಯೋಜನೆ ಸಹಾಯಧನ ನೇರವಾಗಿ ರೈತರ ಖಾತೆಗೆ ತಲುಪುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಕಾಂಗ್ರೆಸ್ ಪ್ರಧಾನಿಯೊಬ್ಬರು, ‘ದೆಹಲಿಯಿಂದ ₹ 1 ಪರಿಹಾರ ಬಿಡುಗಡೆ ಮಾಡಿದರೆ, ಫಲಾನುಭವಿಗೆ ಕೇವಲ 15 ಪೈಸೆ ತಲುಪುತ್ತದೆ’ ಎಂದು ಭ್ರಷ್ಟಾಚಾರದ ವ್ಯವಸ್ಥೆಯನ್ನು ತಮ್ಮ ಮಾತಿನಲ್ಲಿಯೇ ಬಣ್ಣಿಸಿದ್ದರು. ಆದರೆ ಇಂದು ನರೇಂದ್ರ ಮೋದಿ ಸರ್ಕಾರ ₹ 1 ಪರಿಹಾರ ಬಿಡುಗಡೆ ‌ಮಾಡಿದರೆ, ನೇರವಾಗಿ ಫಲಾನುಭವಿಗೆ ತಲುಪುತ್ತಿದೆ. ಇದಕ್ಕೆ ಮೋದಿ ಅವರ ದೂರದೃಷ್ಟಿಯ ಆಡಳಿತವೇ ಕಾರಣ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT