ಸೋಮವಾರ, ಸೆಪ್ಟೆಂಬರ್ 20, 2021
27 °C
ರೆಡ್‌ ಕ್ರಾಸ್‌ ಸಂಸ್ಥೆ ಜಿಲ್ಲಾ ಘಟಕದ ಅಧ್ಕ್ಷ ಮೋಹನ್‌ ಅಭಿಮತ

ಯುವ ಸಮುದಾಯದಿಂದ ಬದಲಾವಣೆ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ದೇಶವನ್ನು ಸದೃಢಗೊಳಿಸುವಲ್ಲಿ  ಯುವ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಮೋಹನ್ ಅಭಿಪ್ರಾಯಪಟ್ಟರು.

ನಗರದ ರೆಡ್ ಕ್ರಾಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಅಂತರರಾಷ್ಟ್ರೀಯ ಯುವ ದಿನಾಚರಣೆ’
ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನರಿಲ್ಲದೆ ಯಾವ ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಜೀವನದಲ್ಲಿ ಸಾಧನೆಯ ಗುರಿ ಮತ್ತು ಉದ್ದೇಶ ಹೊಂದಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಹೇಳಿದರು.

30ನೇ ವಯಸ್ಸಿನಲ್ಲಿಯೇ ಚಿಕಾಗೋಗೆ ಭೇಟಿ ನೀಡಿದ ಸ್ವಾಮಿ ವಿವೇಕಾನಂದ ಅವರನ್ನು ಸನ್ಯಾಸಿ ಎಂದು ಅಲ್ಲಿಯ ಜನರು ಹಾಸ್ಯ ಮಾಡಿದ್ದರು. ಅವರ ಭಾಷಣದ ನಂತರ ಜನರ ಅಭಿಪ್ರಾಯ ಬದಲಾಯಿತು. ನಾವು ಏನನ್ನು ಯೋಚಿಸುತ್ತೇವೋ ಅದೇ ನಮ್ಮನ್ನು ರೂಪಿಸುತ್ತದೆ. ಆದ್ದರಿಂದ ಏನನ್ನು ಯೋಚಿಸುತ್ತೀರಿ ಎಂಬ ಬಗ್ಗೆ ಎಚ್ಚರಿಕೆಯಿರಬೇಕು. ಯೋಚನೆ ಯಾವಾಗಲು ಜೀವಂತವಾಗಿರುತ್ತದೆ ಮತ್ತು ಅದು ಬಹುದೂರ
ಪ್ರಯಾಣಿಸುತ್ತದೆ. ವಿವೇಕಾನಂದರು ಯುವ ಜನರಿಗೆ ಆದರ್ಶರಾಗಿದ್ದಾರೆ ಎಂದು ನುಡಿದರು.

ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಧಿಕಾರಿ ಡಾ.ಪಿ.ನಾಗೇಶ್ ಆರಾಧ್ಯ ಮಾತನಾಡಿ, ಯುವ ಜನರ ಪಾಲಿನ ಸ್ಫೂರ್ತಿಯ ಚಿಲುಮೆ ಸ್ವಾಮಿ ವಿವೇಕಾನಂದ ಜನಿಸಿದ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಅವರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ ಎಂದರು.

ಯುವ ದಿನಾಚರಣೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಮತ್ತು ಮಾರ್ಗದರ್ಶನ ಪಡೆಯಲು ಕಲ್ಪಿಸಿರುವ ಅವಕಾಶವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಯುವ ಶಕ್ತಿಯಿಂದಲೇ ಬದಲಾವಣೆ ಸಾಧ್ಯ. ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಮಾರ್ಗದಲ್ಲಿ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಚ್.ಡಿ.ದೇವೇಗೌಡ ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ವಿನೋದ್, ಜ್ಞಾನಧಾರೆ ಪ್ಯಾರಾ
ಮೆಡಿಕಲ್ ಕಾಲೇಜು ಪ್ರಾಂಶುಪಾಲ ಮಧುಸೂದನ್, ಸಾಮಾಜಿಕ ಕಾರ್ಯಕರ್ತ ಅಮ್ಜದ್ ಖಾನ್, ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಹರೀಶ್, ನಂದನ್, ರವಿಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.