ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆಯ ಮಡಿಲಲ್ಲಿ ಮಕ್ಕಳ ಮಂದಹಾಸ

ಇಂದಿನಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಥಮ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ
Last Updated 28 ನವೆಂಬರ್ 2019, 13:17 IST
ಅಕ್ಷರ ಗಾತ್ರ

ಹಾಸನ: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಮತ್ತು ಆದಿಚುಂಚನಗಿರಿ ಶಾಖಾ ಮಠದ ಆಶ್ರಯದಲ್ಲಿ ನ. 29 ಮತ್ತು 30ರಂದು ನಡೆಯುವ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಕ್ರೀಡಾಂಗಣ ಸಜ್ಜುಗೊಂಡಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನೂರಾರು ಮಕ್ಕಳು ಬಂದಿದ್ದಾರೆ.

ಮಕ್ಕಳೇ ಸಮ್ಮೇಳನದ ಕೇಂದ್ರ ಬಿಂದುವಾಗಿದ್ದು, ಸರ್ವಾಧ್ಯಕ್ಷತೆ, ಸಹ ಅಧ್ಯಕ್ಷತೆ, ವಿವಿಧ ಗೋಷ್ಠಿಗಳ ಅಧ್ಯಕ್ಷತೆಯನ್ನು ಮಕ್ಕಳೇ ವಹಿಸುವರು.

ತುಮಕೂರಿನ ಕೊರಟಗೆರೆಯ ಕೀರ್ತನಾ ನಾಯಕ್‌ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರೆ, ಸಹ ಅಧ್ಯಕ್ಷರಾಗಿ ಮಂಡ್ಯದ ರೇವಂತ್‌ ರಾಜೀವ್‌, ದಕ್ಷಿಣ ಕನ್ನಡ ಜಿಲ್ಲೆಯ ಪ್ರದ್ಯುಮ್ನ ಮೂರ್ತಿ, ದೆಹಲಿಯ ಅಭಿಷೇಕ್‌ ಉಭಾಳೆ ಆಯ್ಕೆಯಾಗಿದ್ದಾರೆ.

ಕ್ರೀಡಾಂಗಣದಲ್ಲಿ 32 ಸಾವಿರ ಚದರ ಅಡಿ ಶಾಮಿಯಾನ ಹಾಕಲಾಗಿದ್ದು, ಐದು ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಹತ್ತು ಸಾವಿರ ಮಕ್ಕಳು ಊಟ ಮಾಡಲು ಕೌಂಟರ್‌ ವ್ಯವಸ್ಥೆ ಮಾಡಲಾಗಿದೆ.

ಅಂದಾಜು 25 ಸಾವಿರ ಮಕ್ಕಳು ಭಾಗವಹಿಸುತ್ತಿದ್ದು, ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೊರ ಜಿಲ್ಲೆಯಿಂದ ಬರುವ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.ದೆಹಲಿ, ಹರಿಯಾಣ, ಮಹಾರಾಷ್ಟ್ರ, ಕೇರಳ, ಆಂದ್ರಪ್ರದೇಶ, ಗೋವಾ, ಮುಂಬೈ, ಮದ್ರಾಸ್‌ನಿಂದ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ.

ಸಮ್ಮೇಳನಕ್ಕೆ ವಿದ್ಯಾರ್ಥಿಗಳೊಂದಿಗೆ ಬರುವ ಶಿಕ್ಷಕರಿಗೆ ಒಒಡಿ ಸೌಲಭ್ಯ ಇದೆ. ಕಾವ್ಯ, ರಂಗಕಲೆ, ಸಾಹಿತ್ಯ ಕುರಿತು ಮಕ್ಕಳೇ ಬರೆದಿರುವ 25 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ. ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ನೂರಕ್ಕೂ ಹೆಚ್ಚು ಪುಸ್ತಕ ಮಳಿಗೆ ತೆರೆಯಲಾಗಿದೆ.

ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರು ರಾಷ್ಟ್ರಧ್ವಜಾರೋಹಣ ಹಾಗೂ ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಎನ್‌.ಅಶೋಕ್‌ ಧ್ವಜಾರೋಹಣ ನೆರವೇರಿಸುವರು. ಮಹಾರಾಜ ಪಾರ್ಕ್‌ನ ಹೇಮಾವತಿ ಪ್ರತಿಮೆ ಬಳಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗುತ್ತದೆ.

11 ಗಂಟೆಗೆ ವೇದಿಕೆ ಕಾರ್ಯಕ್ರಮವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದು, ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು.

ಮಧ್ಯಾಹ್ನ 2 ಗಂಟೆಗೆ ನಡೆಯುವ ಮೊದಲ ಗೋಷ್ಠಿಯಲ್ಲಿ ವೈಜ್ಞಾನಿಕತೆ ಮತ್ತು ವೈಚಾರಿಕೆ, ಎರಡನೇ ಗೋಷ್ಠಿಯಲ್ಲಿ ಪ್ರಸಕ್ತ ಕನ್ನಡ ನಾಡಿನ ಸ್ಥಿತಿಗತಿ, ಮೂರನೇ ಗೋಷ್ಠಿಯಲ್ಲಿ ಜಾಗತಿಕ ತಾಪಮಾನ–ಪರಿಸರ ಕುರಿತ ಮಕ್ಕಳು ವಿಷಯ ಮಂಡಿಸುವರು.

ಶನಿವಾರ ಬೆಳಗ್ಗೆ ಚಿಕ್ಕಮಗಳೂರಿನ ವೈಷ್ಣವಿ ಎನ್‌.ರಾವ್‌ ಅಧ್ಯಕ್ಷತೆಯಲ್ಲಿ ನಡೆಯುವ ಕವಿ ಗೋಷ್ಠಿಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಕವನ ವಾಚಿಸುವರು.

ಹಾಸ್ಯ ಕಲಾವಿದ ನಾಗರಾಜ್ ಕೋಟೆ ಅವರಿಂದ ಮನರಂಜನಾ ಕಾರ್ಯಕ್ರಮ, ಡ್ರಾಮ ಜೂನಿಯರ್ಸ್‌ ಹಾಗೂ ಸರಿಗಮಪ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಸಮಾರಂಭದ ಸಾನಿಧ್ಯವನ್ನು ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಶೌರ್ಯ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿ ಸಮಾರೋಪ ಭಾಷಣ ಮಾಡುವರು.

‘1988ರಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಮಕ್ಕಳ ಸಮ್ಮೇಳನ ನಡೆಸಿದ್ದೇ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲು ಪ್ರೇರಣೆ. ರಾಜ್ಯ ಹಾಗೂ ಹೊರ ರಾಜ್ಯಗಳ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಕಳೆದ ಬಾರಿ ನಡೆದ ರಾಜ್ಯ ಸಮ್ಮೇಳನದಲ್ಲಿ 22 ಸಾವಿರ ಮಕ್ಕಳು ಭಾಗವಹಿಸಿದ್ದರು’ ಎಂದು ಶಾಖಾ ಮಠದ ಶಂಭುನಾಥ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT