ಚಿತ್ರದುರ್ಗದಲ್ಲಿ ಜ.5ರಂದು ಮಡಿವಾಳ ಜಾಗೃತಿ ಮಹಾಸಮ್ಮೇಳನ

7

ಚಿತ್ರದುರ್ಗದಲ್ಲಿ ಜ.5ರಂದು ಮಡಿವಾಳ ಜಾಗೃತಿ ಮಹಾಸಮ್ಮೇಳನ

Published:
Updated:
Deccan Herald

ಹಾಸನ: ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.5 ಮತ್ತು 6 ರಂದು ಚಿತ್ರದುರ್ಗದ ಗುರುಪೀಠದಲ್ಲಿ ಜಾಗೃತಿ ಮಹಾಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ ಹೇಳಿದರು.

ಮಡಿವಾಳ ಸಮುದಾಯ ರಾಜ್ಯದಲ್ಲಿ 15 ಲಕ್ಷ ಜನಸಂಖ್ಯೆ ಹೊಂದಿದೆ. ಶೇಕಡಾ 99 ರಷ್ಟು ಜನರು ತಮ್ಮ ಕುಲಕಸುಬು ಮತ್ತು ಕೂಲಿ ಆಧಾರಿತ ಜೀವನ ಸಾಗಿಸುತ್ತಿದ್ದಾರೆ. ಏಳು ದಶಕ ಕಳೆದರೂ ಸರ್ಕಾರದ ಸೌಲಭ್ಯ ದೊರೆತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯಗಳು ಸಿಗುತ್ತಿಲ್ಲ. ಇವುಗಳನ್ನು ಪಡೆಯಲು ಹಲವು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಗಟ್ಟಿಯಾದ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.

ಮಡಿವಾಳರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕುಲ ಕಸುಬುಗಳಾದ ಬಟ್ಟೆ ತೊಳೆಯುವುದು, ಇಸ್ತ್ರಿ ಮಾಡುತ್ತಾ ಜೀವನ ನಡೆಸುತ್ತಿರುವವರಿಗೆ ಉಚಿತ ಕುಟೀರ ಹಾಗೂ ವಿದ್ಯುತ್ ನೀಡಬೇಕು. ಸಮುದಾಯದ ಕುಲದೇವ ಮಾಚಿದೇವರ ಮೂಲ ಸ್ಥಾನ ದೇವರ ಹಿಪ್ಪರಗಿಯಲ್ಲಿ ದೇವಸ್ಥಾನ, ಕಾರಿ ಮನೆಯಲ್ಲಿನ ಮಾಚಿದೇವರ ಸ್ಮಾರಕ, ಗೋಡಚಿಯಲ್ಲಿನ ಮಾಚಿದೇವರ ಕುರುಹುಗಳು ಮತ್ತು ರಾಜ್ಯದ ಇತರೆ ಸ್ಥಳಗಳ ಎಲ್ಲಾ ಕುರುಹುಗಳನ್ನು ಸರ್ಕಾರ ಸ್ವಾಧೀನಕ್ಕೆ ಪಡೆದು ಅವುಗಳ ರಕ್ಷಣೆ ಅಭಿವೃದ್ಧಿಗೆ ಮಡಿವಾಳ ಮಾಚಿದೇವರ ಸ್ಮಾರಕಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಆಗ್ರಹಿಸಿದರು.

ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಅಥವಾ ಪ್ರಮುಖ ನಿಲ್ದಾಣಕ್ಕೆ ವಚನ ಸಾಹಿತ್ಯ ರಕ್ಷಕ ಮಡಿವಾಳ ಮಾಚಿದೇವರ ಹೆಸರು ಇಡಬೇಕು. ಶೈಕ್ಷಣಿಕ ಉದ್ದೇಶಕ್ಕಾಗಿ ಕಲ್ಬುರ್ಗಿ, ಬಳ್ಳಾರಿ, ಬೆಳಗಾವಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಮೈಸೂರು ನಗರಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ನಿಲಯಗಳನ್ನು ನಿರ್ಮಿಸಬೇಕು. ವಿಧಾನಪರಿಷತ್ ನಲ್ಲಿ ಸ್ಥಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್, ಮುಖಂಡರಾದ ಅಂಜನಪ್ಪ, ವಿಜಯಲಕ್ಷ್ಮಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !