ಕೊಣನೂರು: ಶತಮಾನದ ಐತಿಹ್ಯ ಹೊಂದಿರುವ ಪುರಾಣ ಪ್ರಸಿದ್ಧ ಚೌಡಿಗೌರಮ್ಮ, ಭಕ್ತರನ್ನು ಹರಸುವ ಆರಾಧ್ಯ ದೇವತೆಯಾಗಿ ನೆಲೆಸಿದ್ದು, ಸಹಸ್ರಾರು ಜನರ ಶ್ರದ್ಧಾಕೇಂದ್ರವಾಗಿದ್ದಾಳೆ.
ರಾಮನಾಥಪುರ ಹೋಬಳಿಯ ಕಾಳೇನಹಳ್ಳಿ ಗ್ರಾಮದ ಆರಾಧ್ಯ ವಂಶಸ್ಥರ ಕುಲದೇವತೆಯಾದ ಚೌಡಿ ಗೌರಮ್ಮನ ಮಹಿಮೆ ಅಪಾರವಾಗಿದ್ದು, ದೇವಿಯನ್ನು ನಂಬಿ ಹೊರ ಜಿಲ್ಲೆಗಳಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುವ ವಾಡಿಕೆಯು ಇಂದಿಗೂ ಮುನ್ನಡೆಯುತ್ತಿದೆ.
ಸುಂದರ ರೂಪ ತಾಳುವ ಗೌರಿ ಮುಖ: ಹಿಂದಿನ ಕಾಲದಿಂದಲೂ ಸ್ವರ್ಣಗೌರಿ ಹಬ್ಬದಂದು ಕಾಳೇನಹಳ್ಳಿ ಸಮೀಪದ ಬಸವನಹಳ್ಳಿ ಗ್ರಾಮದ ಕಾವೇರಿ ನದಿ ದಡದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಕಡಲೆ ಹಿಟ್ಟಿನಿಂದ ಚೌಡಿ ಗೌರಿಯನ್ನು ಮೂರ್ತಿ ಸಿದ್ಧಪಡಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ತಲೆ ಭಾಗ ತಿದ್ದಿದ ನಂತರ ಗೌರಿಯ ಮುಖದ ಭಾಗವು ಸುಂದರ ರೂಪ ತಾಳುತ್ತದೆ.
ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಚೌಡಿ ಗೌರಮ್ಮನನ್ನು ಬಸವನಹಳ್ಳಿಯ ಕಾವೇರಿ ನದಿ ದಂಡೆಯ ಈಶ್ವರ ದೇವಾಲಯದಿಂದ ಮಂಗಳವಾದ್ಯ ಸಮೇತ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿದ್ದು, ತಿಂಗಳು ದೇವಿಯನ್ನು ಆರಾಧಿಸಲಾಗಿದೆ.
ದೇವಿ ಬರುವ ಮಾರ್ಗದ ಉದ್ದಕ್ಕೂ ಮಹಿಳೆಯರು ಪೂಜೆ ಸಲ್ಲಿಸುತ್ತಾರೆ. ಕಾಳೇನಹಳ್ಳಿಯ ಹೆಣ್ಣು ಮಕ್ಕಳು ಉಪವಾಸವಿದ್ದು, ಗೌರಮ್ಮ ತಾಯಿಗೆ ಬಾಗಿನ ಆರ್ಪಿಸಿ, ಪೂಜೆ ಸಲ್ಲಿಸಿ ಗ್ರಾಮಕ್ಕೆ ಬರಮಾಡಿಕೊಳ್ಳುತ್ತಾರೆ. ಗ್ರಾಮದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ನಿತ್ಯ ಪೂಜೆ ನಡೆಯುತ್ತದೆ. ಹೊರ ಜಿಲ್ಲೆಗಳಿಂದ ಭಕ್ತರು ಬಂದು, ದೇವಿಯ ದರ್ಶನ ಪಡೆಯುತ್ತಾರೆ. ಮಹಾಲಯ ಅಮಾವಾಸ್ಯೆಯಂದು ವಿಸರ್ಜನೆ ಮಾಡುವುದು ಸಂಪ್ರದಾಯ.
ಕಾಳೇನಹಳ್ಳಿಯ ಚೌಡಿಗೌರಿಯ ಆರಾಧನೆಗೆ ಮಹತ್ವವಿದೆ. ಕಡಲೆ ಹಿಟ್ಟಿನಿಂದ ತಯಾರಿಸಿದ ಗೌರಿಯನ್ನು ತಿಂಗಳ ಕಾಲ ಪೂಜಿಸಲಾಗುತ್ತದೆ.
-ಬಸವರಾಜಾಚಾರ್ ಅರ್ಚಕ
ಚೌಡಿಗೌರಮ್ಮನನ್ನು ಪೂಜಿಸಿದರೆ ಒಳಿತಾಗಲಿದೆ. ಹರಕೆ ಹೊತ್ತುಕೊಳ್ಳುವುದು ಅದನ್ನು ತೀರಿಸುವುದು ಇಲ್ಲಿನ ವಿಶೇಷವಾಗಿದೆ.
-ಪಾಲಾಕ್ಷ್ಯಮ್ಮ ಭಕ್ತೆ
ಚೌಡಿ ಗೌರಮ್ಮ ಹಿನ್ನೆಲೆ
ಗೌರಿ ಯುವತಿಯಾಗಿದ್ದಾಗ ತಂದೆ ಒಂದು ದಿನ ದೇವರ ಪೂಜೆಗೆಂದು ಬಿಲ್ವಪತ್ರೆ ತರಲು ಹೊರ ಹೋಗಿದ್ದರು. ಅಷ್ಟರಲ್ಲಿ ಮನೆಗೆ ಬಂದಿದ್ದ ಬೇರೆ ಕೋಮಿನ ವ್ಯಕ್ತಿ ಈಕೆಯನ್ನು ಮೋಹಿಸಿದ. ಇದರಿಂದ ಹೆದರಿದ ಗೌರಿ ಮನೆಯ ಮೂಲೆಯಲ್ಲಿ ಅಡಗಿ ಕುಳಿತಿದ್ದಳು. ಮಗಳನ್ನು ಕಾಣದ ತಂದೆ ಮೂಲೆಯಲ್ಲಿ ಕುಳಿತಿದ್ದ ಗೌರಿ ತಲೆಯನ್ನು ಹಿಡಿದು ಮೇಲಕ್ಕೆ ಎತ್ತಿದಾಗ ಶಿರ ಮಾತ್ರ ಮೇಲಕ್ಕೆ ಬಂತು. ತನಗಾದ ಅವಮಾನಕ್ಕೆ ಅಂಜಿದ ಗೌರಿ ಪ್ರತಿ ವರ್ಷ ಗೌರಿ ಹಬ್ಬದ ಸಮಯದಲ್ಲಿ ತನ್ನ ಶಿರವನ್ನು ತಂದು ಪ್ರತಿಷ್ಠಾಪಿಸಿ ಪೂಜಿಸಿದರೆ ಕಷ್ಟಗಳನ್ನು ಪರಿಹರಿಸುವುದಾಗಿ ಅಜ್ಞಾಪಿಸಿ ಐಕ್ಯವಾದಳು ಎನ್ನುವ ಪ್ರತೀತಿ ಇದೆ. ಅದರಂತೆ ಗ್ರಾಮದಲ್ಲಿ ಇಂದಿಗೂ ಗೌರಿ ಹಬ್ಬದಲ್ಲಿ ಶಿರಕ್ಕೆ ಮಾತ್ರ ಪೂಜೆ ಸಲ್ಲಿಸಲಾಗುತ್ತದೆ. ಇದಕ್ಕಾಗಿ ಈಕೆಯನ್ನು ಚೌಡಿ ಗೌರಿ ಎಂದು ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.