ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗೆ ಥರಗುಟ್ಟುತ್ತಿರುವ ಮಲೆನಾಡಿಗರು

ತಾಪಮಾನ ಇಳಿಕೆ; ಬೆಚ್ಚನೆಯ ಉಡುಪಿಗೆ ಮೊರೆ
Last Updated 23 ಡಿಸೆಂಬರ್ 2018, 17:30 IST
ಅಕ್ಷರ ಗಾತ್ರ

ಹಾಸನ: ಬಡವರ ಊಟಿ ಹಾಸನದ ಜನರು ಚಳಿಗೆ ಥರಗುಟ್ಟುತ್ತಿದ್ದಾರೆ. ಮೊದಲ ಬಾರಿಗೆ 9.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಚಳಿ ಜತೆಗೆ ಅಧಿಕ ಪ್ರಮಾಣದಲ್ಲಿ ಮಂಜು ಮುಸುಕಿದ ವಾತಾವರಣವಿದೆ. ಹೀಗಾಗಿ ಇಡೀ ದಿನ ಚಳಿಗೆ ನಡುವಂತಾಗಿದೆ. ಮಂಜು ದಟ್ಟವಾದ ಕಾರಣ ಎರಡರಿಂದ ಮೂರಡಿ ಅಂತರದಲ್ಲಿಯೂ ಯಾರಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ವಾಹನ ಸವಾರರು ಹೆಡ್‌ಲೈಟ್‌ ಬೆಳಕಿನಲ್ಲೂ ಸಂಚರಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಡಿ. 19ರಂದು 10.2 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ, 20ರಂದು 9.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಹಾಗಾಗಿ ಬಹುತೇಕರು ಟೋಪಿ, ಜರ್ಕಿನ್‌ ಸೇರಿದಂತೆ ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ.

ನಸುಕಿನಿಂದಲೇ ಅತ್ಯಧಿಕ ಮಂಜು ಆವರಿಸಿದ ಕಾರಣ ನಗರದ ಬಹುತೇಕ ಭಾಗದಲ್ಲಿ ಸೂರ್ಯನ ದರ್ಶನವೇ ಆಗಲಿಲ್ಲ. ಬಹುಮಹಡಿ ಕಟ್ಟಡಗಳೆಲ್ಲ ಭಾರಿ ಪ್ರಮಾಣದ ಮಂಜು ಆವರಿಸಿ ಅಗೋಚರವಾಗಿದ್ದವು.

ಸೂರ್ಯಾಸ್ತಮಾನವಾಗುವ ಮುನ್ನವೇ ಮೈ– ಕೈ ನಡುಗಿಸಲು ಆರಂಭಿಸುವ ಚಳಿ, ಬೆಳಿಗ್ಗೆ 10 ಗಂಟೆಯಾದರೂ ಮೈ ಮುದುರಿಕೊಂಡು ಓಡಾಡುವಂತೆ ಮಾಡುತ್ತಿದೆ.

ಭಾರತದ ಆಗ್ನೇಯ ದಿಕ್ಕಿನ ಸಮುದ್ರದ ಭಾಗದಲ್ಲಿ ವಾಯುಭಾರ ಕುಸಿತವಾಗಿ ವೇಗ ಪಡೆದ ಚಂಡಮಾರುತ ಹಾಗೂ ಪಶ್ಚಿಮದಿಂದ ಬೀಸುವ ಗಾಳಿಯ ಪರಿಣಾಮ ತಾಪಮಾನ ಕನಿಷ್ಠ ಮಟ್ಟ ತಲುಪಲು ಕಾರಣವಾಗಿದೆ.

ಪೆಥಾಯ್‌ ಚಂಡಮಾರುತದ ಪರಿಣಾಮ ನಾಲ್ಕು ದಿನದ ಹಿಂದೆ ಜಿಲ್ಲೆಯ ಕನಿಷ್ಠ ತಾಪಮಾನ 9.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು.
ಸ್ಥಳೀಯ ಹವಾಮಾನ ಇಲಾಖೆ ಪ್ರಕಾರ, ಜಿಲ್ಲೆಯಲ್ಲಿ ಡಿ. 17 ರಿಂದ 22ರವರೆಗೆ ಕಡಿಮೆ ತಾಪಮಾನ ದಾಖಲಾಗಿದೆ.

‘ಪ್ರತಿದಿನ ಮುಂಜಾನೆ ವಾಯು ವಿಹಾರಕ್ಕೆ ಹೋಗುತ್ತೇನೆ. ಮೂರು, ನಾಲ್ಕು ದಿನದಿಂದ ಮಂಜುಮಯ ವಾತಾವರಣ ಇದೆ. ಎದುರಿಗೆ ಇದ್ದವರು ಕಾಣಿಸಿದ ಮಟ್ಟಿಗೆ ಮಂಜು ಬೀಳುತ್ತಿದೆ. ಹಿಮಾಚಲ ಪ್ರದೇಶದ ಅನುಭವ ನೀಡಿತು’ ಎಂದು ಹಿರಿಯ ನಾಗರಿಕ ರಂಗಣ್ಣ ಹೇಳಿದರು.

‘ಚಳಿಗಾಲದಲ್ಲಿ ಶೀತದಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅಸ್ತಮಾ ಉಲ್ಬಣಿಸುತ್ತದೆ. ನಿರ್ಲಕ್ಷ್ಯ ಮಾಡಿದರೆ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಮಿದುಳು ಜ್ವರ, ಮೂತ್ರಪಿಂಡ ಸೋಂಕು ಕಾಣಿಸಿಕೊಳ್ಳುತ್ತದೆ. ವೃದ್ಧರು ಮಕ್ಕಳು ಬೆಚ್ಚನೆಯ ಉಡುಪು ಧರಿಸಬೇಕು’ ಎಂದು ವೈದ್ಯ ಡಾ.ಕೃಷ್ಣಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT