ಸಕಲೇಶಪುರ: ಅವೈಜ್ಞಾನಿಕ ಕಾಮಗಾರಿಗಳಿಂದ ಬೆಳೆ, ಆಸ್ತಿಪಾಸ್ತಿ ಹಾನಿ, ಗುಡ್ಡ, ರಸ್ತೆ, ಕಾಫಿ ತೋಟಗಳ ಭೂ ಕುಸಿತ ಪ್ರದೇಶಗಳಿಗೆ ಶನಿವಾರ ಮುಖ್ಯಮಂತ್ರಿ ಜೊತೆ ಇಡೀ ಸರ್ಕಾರವೇ ತಾಲ್ಲೂಕಿಗೆ ಬಂದು ಹೋಗಿದ್ದು ಒಳ್ಳೆಯ ಬೆಳೆವಣಿಗೆ ಆದರೂ, ಸಮಸ್ಯೆಯ ಪರಿಹಾರಕ್ಕೆ ಸಿದ್ದರಾಮಯ್ಯ ಯಾವುದೇ ಭರವಸೆ ನೀಡದೇ ಹೋಗಿದ್ದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಶಾಸಕರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿ ಶೆಲ್ವಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ವ್ಯವಸ್ಥಾಪಕ ವಿಲಾಸ್ ಬ್ರಹ್ಮಾಂಕರ್, ಜಿಲ್ಲಾಧಿಕಾರಿ ಸತ್ಯಭಾಮ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹತ್ತು ಹಲವು ಅಧಿಕಾರಿಗಳು ಬಂದು ಹೋದರು.
2017 ರಿಂದ 2024ರ 7 ವರ್ಷಗಳಲ್ಲಿ ಸಕಲೇಶಪುರ–ಹೆಗ್ಗದ್ದೆ ನಡುವೆ ಕೇವಲ 12 ಕಿ.ಮೀ. ಚತುಷ್ಪಥ ನಿರ್ಮಾಣ ಮಾಡಿಲ್ಲ. ಇನ್ನೂ ಶೇ 20 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಗುಡ್ಡಗಳನ್ನು ನೇರವಾಗಿ ಕತ್ತರಿಸಿ, ಕೆಲವೆಡೆ ಈಗಾಗಲೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಆದರೆ ಆ ರಸ್ತೆಗಳೆಲ್ಲವೂ ಗುಡ್ಡ ಕುಸಿತದ ಮಣ್ಣಿನಿಂದ ಮುಚ್ಚಿಹೋಗಿವೆ.
ದೊಡ್ಡತಪ್ಪಲೆ, ಆನೇಮಹಲ್ ಬಳಿ ಪ್ರತಿ ವರ್ಷ ಗುಡ್ಡ, ತಡೆಗೋಡೆ ಕುಸಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್ ಆಗುತ್ತಿದೆ. ರಾಜ್ಯದ ಮುಖ್ಯ ಹೆದ್ದಾರಿ ಆಗಿರುವುದರಿಂದ ಸಮಸ್ಯೆಯ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಸಮಸ್ಯೆಗೆ ಮುಖ್ಯಮಂತ್ರಿಯಿಂದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶದ ನಿರೀಕ್ಷೆ ಜನರಲ್ಲಿತ್ತು.
ಎತ್ತಿನಹೊಳೆ ಪೈಪ್‌ಲೈನ್ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹಾರ್ಲೆ–ನಡಹಳ್ಳಿ ನಡುವಿನ ಮುಖ್ಯ ರಸ್ತೆಯೂ ಸೇರಿದಂತೆ ಪೂರ್ಣೇಶ್ ಅವರ ಒಂದೂವರೆ ಎಕರೆಗೂ ಹೆಚ್ಚು ಪ್ರದೇಶದ ಕಾಫಿ ತೋಟ ನಾಶವಾಗಿದೆ. 20 ಎಕರೆ ಬೆಳೆ ಹಾನಿಯಾಗಿದ್ದ ಸ್ಥಳಕ್ಕೂ ಮುಖ್ಯಮಂತ್ರಿ ಭೇಟಿ ನೀಡಿದ್ದರು.
ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಭೂ ಕುಸಿತ ಉಂಟಾಗಿದೆ. ತಾಲ್ಲೂಕಿನ ಹಲವೆಡೆ ಈ ಯೋಜನೆಯಿಂದ ಮಲೆನಾಡು ಭಾಗದಲ್ಲಿ ಹತ್ತಾರು ಸಮಸ್ಯೆ ಉದ್ಭವಿಸಿದೆ. ಅತಿವೃಷ್ಟಿಯಿಂದ ಕಾಫಿ, ಕಾಳುಮೆಣಸು, ಭತ್ತ, ಶುಂಠಿ ಬೆಳೆ ಹಾನಿಯಾಗಿದ್ದು ರೈತರು, ಬೆಳೆಗಾರರಿಗೆ ಪರಿಹಾರ ನೀಡುವಂತೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಆದರೆ ಸ್ಥಳೀಯರು ನಿರೀಕ್ಷೆ ಮಾಡಿದ್ದ ಸ್ಪಂದನೆ ಮುಖ್ಯಮಂತ್ರಿಯಿಂದ ಬರಲಿಲ್ಲ ಏಕೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆತಂಕವಿತ್ತೆ?
ಮುಡಾ ಹಗರಣ ಸಂಬಂಧ ಬಿಜೆಪಿ ಜೆಡಿಎಸ್ ಪಾದಯಾತ್ರೆ ಆರಂಭಿಸಿದ್ದು ಒತ್ತಡದಲ್ಲಿ ಇದ್ದುದರಿಂದ ಸಿದ್ದರಾಮಯ್ಯ ಮುಖದಲ್ಲಿ ಉತ್ಸಾಹ ಕಾಣುತ್ತಿರಲಿಲ್ಲ. ಪ್ರವಾಸಿ ಮಂದಿರದಲ್ಲಿ ಊಟ ಕಾರ್ಯಕರ್ತರ ಭೇಟಿ ಸುದ್ದಿಗೋಷ್ಠಿ ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ ಎಲ್ಲವನ್ನೂ ಬಿಟ್ಟು ನೇರವಾಗಿ ಬೈಪಾಸ್ ಮೂಲಕ ಹೋದರು ಎನ್ನುವ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಹುದ್ದೆ ಅಲುಗಾಡುತ್ತಿರುವುದೇ ಇದಕ್ಕೆ ಕಾರಣ ಇರಬೇಕು. ಇಲ್ಲದೇ ಹೋಗಿದ್ದರೆ ಕ್ಷೇತ್ರದ ಗಂಭೀರ ಸಮಸ್ಯೆಗಳಿಗೆ ಕಾರಣರಾದ ಅಧಿಕಾರಿಗಳನ್ನು ಸ್ಥಳದಲ್ಲಿಯೇ ತೀವ್ರ ತರಾಟೆಗೆ ತೆಗೆದುಕೊಳ್ಳದೇ ಇರುತ್ತಿರಲಿಲ್ಲ. ಪತ್ರಕರ್ತರು ಪ್ರಶ್ನೆಗಳನ್ನು ಕೇಳುತ್ತಿದ್ದರೂ ಹಾಗೆಯೇ ಹೋಗುತ್ತಿರಲಿಲ್ಲ ಎಂದು ಕೆಸಗಾನಹಳ್ಳಿಯ ಕಾಫಿ ಬೆಳೆಗಾರ ಟಿ.ಪಿ.ಸುರೇಂದ್ರ ಹೇಳಿದರು.
ನಿರಾಸೆ ಮೂಡಿಸಿದ ಸಿಎಂ ನಡೆ
ಮುಖ್ಯಮಂತ್ರಿ ತಾಲ್ಲೂಕಿಗೆ ಭೇಟಿ ನೀಡಿದ್ದರೂ ಯಾವ ಭರವಸೆಯನ್ನೂ ನೀಡದೇ ಹೋಗಿದ್ದು ನಿರಾಸೆ ಆಗಿದೆ ಎಂದು ಹಾನಬಾಳು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಆರ್. ಮೋಹನ್ ಅಚ್ಚರಡಿ ಹೇಳಿದರು. ಅತಿವೃಷ್ಟಿಯಿಂದ ಬೆಳೆ ಹಾನಿ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಉಂಟಾದ ಆಸ್ತಿಪಾಸ್ತಿ ನಷ್ಟಕ್ಕೆ ಪರಿಹಾರವಾಗಿ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಣೆಯನ್ನೋ ಪರಿಹಾರದ ಮೊತ್ತವನ್ನೋ ಘೋಷಣೆ ಮಾಡಬಹುದಿತ್ತು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.