ಭಾನುವಾರ, ಸೆಪ್ಟೆಂಬರ್ 19, 2021
23 °C

ತಾ.ಪಂ, ಜಿ.ಪಂ ಚುನಾವಣೆ ನಡೆಸಿ: ರಾಜ್ಯ ಚುನಾವಣಾ ಆಯೋಗಕ್ಕೆ ಶಾಸಕ ರೇವಣ್ಣ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಕಡಿಮೆ ಆಗಿರುವುದರಿಂದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗವನ್ನು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ಚುನಾವಣೆ ಪ್ರಕ್ರಿಯೆ ಗ್ರಾಮೀಣ ಭಾಗದಲ್ಲಿ ನಡೆಯಲಿದೆ. ಪ್ರಚಾರ ನಿಷೇಧಿಸಿ, ಬೂತ್‌ಗಳ ಸಂಖ್ಯೆ ಹೆಚ್ಚಿಸಿ, 15 ರಿಂದ 20 ದಿನಗಳ ಒಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಚುನಾಯಿತ ಪ್ರತಿನಿಧಿಗಳು ಆಡಳಿತ ನಡೆಸಬೇಕಾದ ಕಡೆ ಅಧಿಕಾರಿಶಾಹಿ ನಡೆಸುವುದು ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಚುನಾವಣೆ ನಡೆಸುವುದು ಬೇಕಾಗಿಲ್ಲ. ಅವಧಿ ಮುಗಿದು 6 ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಈಗಾಗಲೇ 4 ತಿಂಗಳಾಗಿದೆ. ಕಲಬುರ್ಗಿ, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಿಸಲಾಗಿದೆ. ಅದೇ ರೀತಿ ತಾಲ್ಲೂಕು ಮತ್ತು ಪಂಚಾಯಿತಿಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಆರ್‌ಡಿಪಿಆರ್‌ ಇಲಾಖೆ ಜಿಲ್ಲಾ ಪಂಚಾಯಿತಿಗಳಿಗೆ ₹ 1,296 ಕೋಟಿ ಅನುದಾನ ನೀಡಿದೆ. ಅದನ್ನು ಆಡಳಿತಾಧಿಕಾರಿಗಳು ಬಿಜೆಪಿ ಶಾಸಕರಿಗೆ ಹಂಚಿಕೆ ಮಾಡುತ್ತಿದ್ದಾರೆ. ಎಲ್ಲ ಕ್ಷೇತ್ರದ ಶಾಸಕರಿಗೂ ಸಮಾನವಾಗಿ ಹಂಚಿಕೆ ಮಾಡಬೇಕು ಎಂದರು.

ಸೆಪ್ಟೆಂಬರ್‌ ತಿಂಗಳಲ್ಲಿ ಕೋವಿಡ್‌ 3ನೇ ಅಲೆ ಆರಂಭವಾಗಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ. 3ನೇ ಅಲೆ ಜಿಲ್ಲೆಗೆ ಕಾಲಿಡುವ ಮೊದಲೇ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಸಿ.ಎಂ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಕೂಡಲೇ ಜಿಲ್ಲೆಯ ಎಲ್ಲಾ ಶಾಸಕರು, ಅಧಿಕಾರಿಗಳ ಸಭೆ ಕರೆಯಬೇಕು. ಜಿಲ್ಲೆಯಲ್ಲಿ ಇಂದಿಗೂ ನಿತ್ಯ 95 ಕ್ಕೂ ಹೆಚ್ಚು ಪಾಸಿಟಿವ್‌ ಪತ್ತೆಯಾಗುತ್ತಿದೆ. 3 ರಿಂದ 4 ಜನ ಮೃತಪಡುತ್ತಿದ್ದಾರೆ. ಮತ್ತೊಮ್ಮೆ ಜಿಲ್ಲೆಯ ಎಲ್ಲರನ್ನು ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು