ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದೇ ಪದೇ ಕಾಂಗ್ರೆಸ್‌ ನಾಯಕರ ಅವಹೇಳನ: 'ಸಿ.ಟಿ.ರವಿ ವಿರುದ್ಧ ರಾಜ್ಯಪಾಲರಿಗೆ ದೂರು'

Last Updated 29 ನವೆಂಬರ್ 2022, 5:38 IST
ಅಕ್ಷರ ಗಾತ್ರ

ಹಾಸನ: ಕಾಂಗ್ರೆಸ್ ನಾಯಕರ ವಿರುದ್ಧ ಕೆಟ್ಟ ಪದಬಳಕೆ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಖಡಾಖಡಿ ಪೀರ್‌ಸಾಬ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಟಿ. ರವಿ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಪದೇ ಪದೇ ಕೆಟ್ಟ ಪದಗಳಿಂದ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಸಿದ್ದರಾಮಯ್ಯ ಉಲ್ಲಾಖಾನ್ ಎಂದು ಹೇಳುವ ಮೂಲಕ ತಮ್ಮ ಕೆಟ್ಟ ರಾಜಕೀಯವನ್ನು ತೋರಿಸಿದ್ದಾರೆ ಎಂದು ಟೀಕಿಸಿದರು.

ಈ ರೀತಿ ಹೇಳಿಕೆಯನ್ನು ನೀಡುತ್ತಿರುವ ಅವರು ಸಮಾಜದಲ್ಲಿ ಶಾಂತಿ, ನೆಮ್ಮದಿ ಕದಡುವ ಕೆಲಸವನ್ನು ಮಾಡುತ್ತಿದ್ದು, ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಬಿಜೆಪಿಯ ಈಶ್ವರಪ್ಪ, ಸಿ.ಟಿ. ರವಿ, ಪ್ರತಾಪ್ ಸಿಂಹ ಅವರಂತಹ ರಾಜಕಾರಣಿಗಳು ಸಮಾಜದಲ್ಲಿ ಶಾಂತಿ ಕದಡುವಂತಹ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿರುವುದು ಸರಿಯಲ್ಲ‌ ಎಂದರು.

ಮುಖಂಡ ಎಚ್.ಕೆ. ಮಹೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂದು ಬಿಂಬಿಸಲು ಸಿ.ಟಿ. ರವಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ, ನೆಟ್ಟಾರು ಪ್ರವೀಣ್‌ ಕೊಲೆ ನಡೆದಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಕಾರಿನ ಮೇಲೆ ಹಲ್ಲೆ ಮಾಡಿದ್ದು ಮರೆಯಬಾರದು ಎಂದು ಹೇಳಿದರು.

ಸಿ.ಟಿ. ರವಿ ಉಗ್ರಗಾಮಿ ಸಂಘಟನೆಯ ಅಧ್ಯಕ್ಷರಂತೆ ಹೇಳಿಕೆ ನೀಡುತ್ತಾರೆ. ಈ ರೀತಿಯ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಪ್ರಚೋದನಾತ್ಮಕ ಕೆಲಸ ಮಾಡುತ್ತಿರುದ್ದು, ಅವರು ಯಾವ ಹಂತಕ್ಕೂ ಇಳಿಯಲು ಹಿಂಜರಿಯುವುದಿಲ್ಲ ಎಂದು ಲೇವಡಿ ಮಾಡಿದರು.

ಶಾಸಕ ಪ್ರೀತಂ ಗೌಡ ನಗರ ಸಮೀಪದ ಗ್ರಾಮಗಳಲ್ಲಿ ರಿಯಲ್ ಎಸ್ಟೇಟ್ ಕಾಮಗಾರಿ ನಡೆಸುತ್ತಿದ್ದು, ನೂರಾರು ಎಕರೆ ಜಮೀನನ್ನು ಹಲವರ ಹೆಸರಿನಲ್ಲಿ ಖರೀದಿಸಿ ಜಾಯಿಂಟ್ ವೆಂಚರ್ ಮೂಲಕ ಲೇಔಟ್ ಮಾಡುತ್ತಿದ್ದಾರೆ. ಕೆಲವು ತಿಂಗಳಲ್ಲಿ ಈ ಸಂಬಂಧ ಅಗತ್ಯ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಮಹೇಶ್ ತಿಳಿಸಿದರು.

ವಿನೋದ್ ಇದ್ದರು‌.

‘ಕಾಂಗ್ರೆಸ್‌ ಗೆಲುವಿಗೆ ಸಹಕಾರ’
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಂಡಿದ್ದು, ರಾಜ್ಯ ನಾಯಕರ ತೀರ್ಮಾನಕ್ಕೆ ಬದ್ಧರಿರುವುದಾಗಿ ಹೇಳಿದ ಎಚ್‌.ಕೆ. ಮಹೇಶ್, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಯಾರಿಗೇ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಪಕ್ಷದ ಗೆಲುವಿಗೆ ಸಹಕಾರ ನೀಡುವುದಾಗಿ ಹೇಳಿದರು.

‘ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೆ. ಆದರೆ ಹಿಂದುಳಿದ ವರ್ಗಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಲಕ್ಷ್ಮಣ್ ಅವರಿಗೆ ಅವಕಾಶ ದೊರಕಿಸಿ ಕೊಟ್ಟಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈ ಬಗ್ಗೆ ಬೇಸರವಿದೆ’ ಎಂದು ಹೇಳಿದರು.

**

ಜಿಲ್ಲೆಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮುಂದಿನ ಆರು ತಿಂಗಳಲ್ಲಿ ರಾಜಕೀಯ ಬುಡಮೇಲಾಗಲಿದ್ದು ಪ್ರೀತಂ ಗೌಡ ಕಾಂಗ್ರೆಸ್‌ಗೆ ಬಂದರೂ ಅಚ್ಚರಿ ಇಲ್ಲ.
–ಎಚ್‌.ಕೆ. ಮಹೇಶ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT